ಬಾಲಿವುಡ್ ನ ಹಿರಿಯ ನಟ ವಿಕ್ರಮ್ ಗೋಖಲೆ ಅವರು ನಿಧನರಾಗಿದ್ದಾರೆ. ಕೆಲ ತಿಂಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಿಕ್ರಮ್ ಗೋಖಲೆ ಅವರು ಪುಣೆಯ ದೀನನಾಥ್ ಮಂಗೇಶ್ವರ್ ಆಸ್ಪತ್ರೆಯಲ್ಲಿ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.
ಭಾರತೀಯ ಸಿನಿಮಾದಲ್ಲಿ ಪ್ರಸಿದ್ಧಿ ಪಡೆದ ಗೋಖಲೆ ಅವರು ಮರಾಠಿ ರಂಗಭೂಮಿ, ಹಿಂದಿ ಸಿನಿಮಾ ಮತ್ತು ಕಿರುತೆರೆಯಲ್ಲಿ ಅವರ ಪಾತ್ರಗಳಿಂದ ವ್ಯಾಪಕವಾಗಿ ಮೆಚ್ಚುಗೆ ಗಳಿಸಿದ್ದಾರೆ. ಬಿಗ್ ಬಿ ಜೊತೆ ʻಅಗ್ನಿಪಥ್ʼ, ಸಲ್ಮಾನ್ ಖಾನ್ ಜೊತೆ ʻಹಮ್ ದಿಲ್ ದೇ ಚುಕೇ ಸನಮ್ʼ, ಶಿಲ್ಪಾ ಶೆಟ್ಟಿ ನಟನೆಯ `ನಿಕ್ಕಮ್ಮಾ’ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ವಿಕ್ರಮ್ ಗೋಖಲೆ ನಟಿಸಿದ್ದಾರೆ.
ಗೋಖಲೆ ಅವರಿಗೆ 2011 ರಲ್ಲಿ ಅವರ ರಂಗಭೂಮಿ ನಟನೆಗಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. 2013 ರಲ್ಲಿ, ಅವರು ತಮ್ಮ ಮರಾಠಿ ಸಿನಿಮಾಗಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ವಿಕ್ರಮ್ ಗೋಖಲೆ ನಿಧನ ಸುದ್ದಿಯಿಂದ ನಟನಾ ಕ್ಷೇತ್ರ ಶೋಕ ಸಾಗರದಲ್ಲಿ ಮುಳುಗಿದೆ.










