ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ : ರಣದೀಪ್ ಸುರ್ಜೆವಾಲಾ.

48
firstsuddi

ಹುಬ್ಬಳ್ಳಿ : ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ಎಲ್ಲ ಅರ್ಹತೆ ಕಳೆದುಕೊಂಡಿದೆ. ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ. ಬಿಜೆಪಿ ಭ್ರಷ್ಟಾಚಾರದ ಸಮುದ್ರದಲ್ಲಿ ಮುಳುಗಿ ಹೋಗಿದೆ. ಪ್ರಜಾಪ್ರಭುತ್ವ ಮೌಲ್ಯವನ್ನು ಗಾಳಿಗೆ ತೂರಿದ ಬಿಜೆಪಿಯದ್ದು ಅನೈತಿಕ ಸರ್ಕಾರವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ವಾಗ್ದಾಳಿ ನಡೆಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡೂ ಕೈಯಲ್ಲಿ ಲಂಚ ತೆಗೆದುಕೊಳ್ಳುತ್ತಾ ಬಿಜೆಪಿ ರಾಜ್ಯದಲ್ಲಿ ಲೂಟಿ ಮಾಡ್ತಿದೆ. ದೇಶದ ಅತ್ಯಂತ ಭ್ರಷ್ಟ ಸರ್ಕಾರ ಬೊಮ್ಮಾಯಿ ಸರ್ಕಾರವಾಗಿದೆ. 40 ರಿಂದ 50 ಪರ್ಸೆಂಟೇಜ್ ಭ್ರಷ್ಟಾಚಾರದಲ್ಲಿ ಬಿಜೆಪಿ ಮುಳುಗಿ ಹೋಗಿದೆ. ಮಠಗಳಿಗೆ ನೀಡುವ ಅನುದಾನದಲ್ಲಿಯೂ ಭ್ರಷ್ಟಾಚಾರ ನಡೆಸಿದೆ. ಶೇ. 5 ಡಿಸ್ಕೌಂಟ್ ನೀಡಿ 35 ಪರ್ಸೆಂಟ್ ಕಮಿಷನ್ ಹೊಡೆದಿದೆ ಎಂದು ಸುರ್ಜೆವಾಲಾ ಆರೋಪಿಸಿದರು.

ಕರ್ನಾಟಕದಲ್ಲಿ 40% ಹೊರತಾಗಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಪಿಎಸ್ಐ ಹಗರಣ ನೇರವಾಗಿ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿ ಬಾಗಿಲಿಗೆ ಬಂದಿದೆ. ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರ ಬಂಧನ ಆಗಿರೋದು ಇತಿಹಾಸದಲ್ಲಿ ಇದೇ ಮೊದಲು. ಬಿಜೆಪಿ ಮಟ್ಟದ ಅಧಿಕಾರಿಗೆ ಮುಟ್ಟಿದೆ ಅಂದ್ರೆ ಮೇಲಿನ ಗೃಹ ಸಚಿವರಿಗೂ ಮುಟ್ಟಿದೆ ಎಂದರ್ಥ. ಇದರ ತನಿಖೆಯನ್ನು ಯಾರು ಮಾಡಬೇಕು. ಸರ್ಕಾರದಿಂದ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಇದೆಲ್ಲಕ್ಕೂ ಅಂತ್ಯ ಹಾಡುವ ಸಮಯ ಬಂದಿದೆ. ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಕಾಂಗ್ರೆಸ್ ಪಕ್ಷವು ಸಹ ಈ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸುತ್ತಿದೆ ಎಂದರು.

ಕೃಷ್ನಾ ನದಿ ನೀರಿನ ಬಳಕೆ ಕುರಿತಾಗಿ ಡಿಸೆಂಬರ್ 30 ರಂದು ವಿಜಯಪುರದಲ್ಲಿ ಹೋರಾಟ ಮಾಡ್ತೇವೆ. ಮಹಾದಾಯಿ ವಿಚಾರವಾಗಿ ಹುಬ್ಬಳ್ಳಿ – ಧಾರವಾಡದಲ್ಲಿ ಜನವರಿ 2 ಕ್ಕೆ ಹೋರಾಟ ಮಾಡಲಾಗುವುದು. ಎಸ್.ಸಿ., ಎಸ್.ಟಿ. ಸಮುದಾಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಚಿತ್ರದುರ್ಗದಲ್ಲಿ ಬೃಹತ್ ಜಾಥಾ ಆಯೋಜನೆ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.

ಜನವರಿ 9ರ ನಂತರ ರಾಜ್ಯಾದ್ಯಂತ ಬಸ್ ಯಾತ್ರೆ ನಡೆಸುತ್ತೇವೆ. ಎಲ್ಲಾ ನಾಯಕರೂ ಬಸ್ ಯಾತ್ರೆಯಲ್ಲಿ ಭಾಗಿಯಾಗ್ತಾರೆ. ಬಸ್ ಯಾತ್ರೆಯಲ್ಲಿ ಭಾಗಿಯಾಗೋಕೆ ಸಿದ್ದರಾಮಯ್ಯ ಕಂಡಿಷನ್ ಹಾಕಿರೋ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ನನಗೆ ಯಾವುದೇ ರೀತಿಯ ಕಂಡಿಷನ್ ಹಾಕಿಲ್ಲ. ನಮ್ಮ ನಾಯಕತ್ವ ಒಗ್ಗಟ್ಟಾಗಿದೆ ಎಂದು ಹೇಳಿದರು.