ಬಿಜೆಪಿ ಶಾಸಕನ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ : ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದ ಸಿಎಂ.

62
firstsuddi

ಬೆಂಗಳೂರು : ಭ್ರಷ್ಟಾಚಾರ ತಡೆಯುವುದಕ್ಕಾಗಿ ಲೋಕಾಯುಕ್ತ ಸ್ಥಾಪನೆ ಮಾಡಿದ್ದೇವೆ, ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ ಮನೆ ಮೇಲೆ ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿರೋದೇ ಭ್ರಷ್ಟಾಚಾರ ತಡೆಯೋಕೆ. ಹಿಂದೆ ಲೋಕಾಯುಕ್ತ ಇಲ್ಲದೇ ಕಾಂಗ್ರೆಸ್ ಕಾಲದ ಕೇಸ್ ಗಳು ಮುಚ್ಚಿಹೋಯ್ತು. ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ತನಿಖೆಯಾಗಲಿ, ನಾವು ಯಾರನ್ನೂ ರಕ್ಷಣೆ ಮಾಡಲ್ಲ ಎಂದು ಹೇಳಿದರು.

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಇದುವರೆಗೆ ಮಾಡಾಳ್ ಪ್ರಶಾಂತ್ ಮನೆಯಿಂದ ಬರೋಬ್ಬರಿ 6 ಕೋಟಿ ಹಣವನ್ನು ಸೀಜ್ ಮಾಡಲಾಗಿದೆ.

ನಿನ್ನೆ ರಾತ್ರಿಯಿಂದಲೇ ಪ್ರಶಾಂತ್ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತಲಾಶ್ ನಡೆಸುತ್ತಿದ್ದು, ಮಾಡಾಳ್ ಪ್ರಶಾಂತ್ ಮನೆ ಕಚೇರಿಯಲ್ಲಿ ಸಿಕ್ಕ ಹಣ ಯಾರದ್ದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ಪ್ರಶಾಂತ್ ಸೇರಿ ಐವರನ್ನು ಬಂಧಿಸಲಾಗಿದೆ.