ಬೆಂಗಳೂರು : ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಬಿಡಿಎ ಅಧಿಕಾರಿಗಳು ಜೆಸಿಬಿಗಳನ್ನು ಬಳಸಿ ನಗರದ ಎಚ್ ಬಿಆರ್ ಬಡಾವಣೆಯಲ್ಲಿ ಅಕ್ರಮ ಒತ್ತುವರಿಗೆ ಒಳಗಾಗಿದ್ದ 100 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಕ್ಕೆ ಪಡೆದಿದ್ದಾರೆ. ಬಡಾವಣೆಯ 2 ನೇ ಹಂತದ ನಾಗವಾರದಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡ ಸರ್ವೆ ನಂಬರ್ 75 ರ ಒಂದೂಕಾಲು ಎಕರೆ ಜಾಗವನ್ನು ಬಿಟ್ಟುಕೊಡದೇ ಭೂಮಾಲೀಕರು ಆ ಜಾಗದಲ್ಲಿ 15 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಮತ್ತು ಶೆಡ್ ಗಳನ್ನು ನಿರ್ಮಿಸಿದ್ದರು.
ಸದರಿ ಸರ್ವೇ ನಂಬರ್ ನ 6 ಎಕರೆ ಜಮೀನನ್ನು ಎಚ್ ಬಿಆರ್ 2 ನೇ ಹಂತದ ಬಡಾವಣೆ ನಿರ್ಮಾಣಕ್ಕೆ 1989 ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಈ ಪೈಕಿ ಒಂದೂವರೆ ಎಕರೆ ಜಾಗವನ್ನು ವರ್ತುಲ ರಸ್ತೆಗೆ ಬಳಸಿಕೊಳ್ಳಲಾಗಿತ್ತು. ಉಳಿದ ನಾಲ್ಕೂವರೆ ಎಕರೆ ಪೈಕಿ ಒಂದೂವರೆ ಎಕರೆ ಜಾಗವನ್ನು ಬಿಟ್ಟುಕೊಟ್ಟಿರಲಿಲ್ಲ. ಬಿಡಿಎ ಸ್ವಾಧೀನವನ್ನು ಪ್ರಶ್ನಿಸಿ ಮಾಲೀಕರು 1989 ರಲ್ಲಿ ಸಿಟಿ ಸಿವಿಲ್ ಕೋರ್ಟಿನ ಮೊರೆ ಹೋಗಿದ್ದರಾದರೂ, ಬಿಡಿಎ ಪರವಾಗಿ ತೀರ್ಪು ಬಂದಿತ್ತು. ಆದಾಗ್ಯೂ ಸದರಿ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಅದರಿಂದ ಆದಾಯ ಗಳಿಸುತ್ತಿದ್ದರು. ಹಲವು ಬಾರಿ ಬಿಡಿಎ ಎಚ್ಚರಿಕೆ ನೀಡಿದ್ದರೂ ತೆರವು ಮಾಡಿರಲಿಲ್ಲ.
ಇಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದಲ್ಲಿ ಕಾರ್ಯಪಾಲಕ ಇಂಜಿನಿಯರ್ ಜಿ.ಕುಮಾರ್ ಅವರನ್ನೊಳಗೊಂಡ ಅಧಿಕಾರಿಗಳ ತಂಡವು ಸ್ಥಳೀಯ ಪೊಲೀಸರ ನೆರವಿನಿಂದ 15 ಕ್ಕೂ ಹೆಚ್ಚು ಜೆಸಿಬಿಗಳನ್ನು ಬಳಸಿ 15 ವಾಣಿಜ್ಯ ಮಳಿಗೆಗಳು ಹಾಗೂ ಶೆಡ್ ಗಳನ್ನು ನೆಲಸಮ ಮಾಡಿ ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ. ಈ ಹಿಂದೆ ಮೂರ್ನಾಲ್ಕು ಬಾರಿ ಕಟ್ಟಡಗಳನ್ನು ನೆಲಸಮ ಮಾಡಲು ತೆರಳಿದ ಸಂದರ್ಭದಲ್ಲಿ ಮಾಲೀಕರು ತಮ್ಮ ಪ್ರಭಾವ ಬೀರಿ ಮತ್ತು ಪ್ರತಿಭಟನೆ ನಡೆಸಿದ್ದರಿಂದ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಡಿಎ ಅಧಿಕಾರಿಗಳು 200ಕ್ಕೂ ಹೆಚ್ಚು ಪೊಲೀಸರ ಭದ್ರತೆಯನ್ನು ಪಡೆದುಕೊಂಡು ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್. ಆರ್ ವಿಶ್ವನಾಥ್, ಬಿಡಿಎ ಉಸ್ತುವಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎಷ್ಟೇ ಪ್ರಭಾವಿಗಳು ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಅದರಂತೆ ಬಿಡಿಎ ಕ್ರಮಕೈಗೊಳ್ಳುತ್ತಿದೆ. ಹೆಚ್ ಡಿಆರ್, ಹೆಚ್ ಎಸ್ ಆರ್ ಬಡಾವಣೆಗಳು ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಮಾಹಿತಿಗಳಿವೆ. ಈ ಹಿನ್ನೆಲೆಯಲ್ಲಿ ಒತ್ತುವರಿದಾರರು ಬಿಡಿಎ ಜಾಗವನ್ನು ಸ್ವಯಂಪ್ರೇರಿತವಾಗಿ ಕೂಡಲೇ ಬಿಟ್ಟು ಕೊಡಬೇಕು. ಇಲ್ಲವಾದರೆ, ಕಾನೂನು ರೀತಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸದರಿ ಜಾಗಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.










