ಬೆಂಗಳೂರಿನಲ್ಲಿ ಮೂರಂತಸ್ತಿನ ಕಟ್ಟಡಕ್ಕೆ ಬೆಂಕಿ, ಇಬ್ಬರ ಸಾವು.

33

ಬೆಂಗಳೂರು: ಸಿಲಿಂಡರ್ ಸೋರಿಕೆಯಿಂದ ನಿರ್ಮಾಣ ಹಂತದ ಕಟ್ಟಡ ಬೆಂಕಿಗಾಹುತಿಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ನಗರದ ಮಾಗಡಿ ರಸ್ತೆಯ ಸೀಗೆಹಳ್ಳಿಯ ಶಿವಾನಿ ಗ್ರೀನ್ಸ್ ಲೇಔಟ್‍ನಲ್ಲಿ ನಡೆದಿದೆ. ಮೃತ ಕಾರ್ಮಿಕರನ್ನು ಬಿಹಾರ ಮೂಲದ ರೋಶನ್ ಹಾಗೂ ಉತ್ತರ ಪ್ರದೇಶ ಮೂಲದ ಉದಯ್ ಬಾನು ಎಂದು ಗುರುತಿಸಲಾಗಿದೆ. ಸತೀಶ್ ಎನ್ನುವವರಿಗೆ ಸೇರಿದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿರ್ಮಾಣ ಹಂತದಲ್ಲಿದ್ದ ಬಿಲ್ಡಿಂಗ್‍ನಲ್ಲಿ ವುಡ್ ವರ್ಕ್ಸ್ ಮಾಡಲಾಗಿತ್ತು. ಈ ವೇಳೆ ಕೆಲಸಗಾರರ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಬಿದ್ದು, ಧಗಧಗನೆ ಹೊತ್ತಿ ಉರಿದ ಕಟ್ಟಡ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕಟ್ಟಡದಲ್ಲಿ ಒಟ್ಟು 6 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ನಾಲ್ಕು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನುಳಿದ ಇಬ್ಬರು ಕಾರ್ಮಿಕರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿದ್ದು, ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.