ಬೆಳಗಾವಿಯಲ್ಲಿ ‘ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ’ ಐತಿಹಾಸಿಕ ಸಮಾವೇಶ.

23

ಬೆಳಗಾವಿ: ಬೆಳಗಾವಿಯ ಸಿಪಿಇಡಿ ಮೈದಾನವು ‘ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ’ ಐತಿಹಾಸಿಕ ಕಾರ್ಯಕ್ರಮಕ್ಕೆ ಸಿದ್ಧವಾಗಿದೆ. ಮಹಾತ್ಮ ಗಾಂಧಿ, ಅಂಬೇಡ್ಕರ್ ವಿಚಾರಧಾರೆಗಳನ್ನ ಮುಂದಿಟ್ಟುಕೊಂಡು ರಣಕಹಳೆ ಮೊಳಗಿಸಲು ಕಾಂಗ್ರೆಸ್ ಸಜ್ಜಾಗಿದೆ. ರಾಜಕೀಯ ಮತ್ತು ಸಂವಿಧಾನ ರಕ್ಷಣೆ ವಿಷಯವಾಗಿ ದೇಶಕ್ಕೆ ಹೊಸ ಸಂದೇಶ ನೀಡಲು ಇಲ್ಲಿ ಇಂದು ಅಯೋಜಿಸಲಾಗಿರುವ ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಸಮಾವೇಶ ಹಲವು ನಿರೀಕ್ಷೆ ಮತ್ತು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಬೆಳಗಾವಿ ಸಾಕ್ಷಿಯಾಗಿತ್ತು. ಈಗ ಅಧಿವೇಶನದ ಶತಮಾನೋತ್ಸವದ ಭಾಗವಾಗಿ ಸಮಾವೇಶ ನಡೆಯುತ್ತಿದೆ. ಕೈ ಪಡೆಯ ಘಟಾನುಘಟಿ ನಾಯಕರ ದಂಡೇ ಬೆಳಗಾವಿಯತ್ತ ಮುಖ ಮಾಡಿದೆ. ಕೆಪಿಸಿಸಿ ಅಧ್ಯಕ್ಷರು ಆಗಿರುವ ಡಿ.ಕೆ ಶಿವಕುಮಾರ್ ಸಮಾವೇಶದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕೆಲ ಆಂತರಿಕ ತಿಕ್ಕಾಟದ ವಿದ್ಯಮಾನಗಳ ಮಧ್ಯೆಯೂ, ನಾಯಕರು ಮತ್ತು ಕಾರ್ಯಕರ್ತರು ಸಮಾವೇಶದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಪಕ್ಷ ಸಂಘಟನೆ ಬಲವರ್ಧನೆಯ ವಿಶ್ವಾಸದಲ್ಲಿ ವರಿಷ್ಠರಿದ್ದಾರೆ. ಕಾಂಗ್ರೆಸ್ ನಾಯಕರ ಕಟೌಟು, ಪಕ್ಷದ ಧ್ವಜಗಳಿಂದ ನಗರದ ಪ್ರಮುಖ ರಸ್ತೆಗಳು ಹೊಳೆಯುತ್ತಿವೆ.