ಬೈಕ್ ಗೆ ಟಿಪ್ಪರ್ ಡಿಕ್ಕಿ – ತಾಯಿ-ಮಗು ಸ್ಥಳದಲ್ಲೇ ಸಾವು…

76
firstsuddi

ಬೆಂಗಳೂರು : ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾರತ್ ಹಳ್ಳಿ ಹೊರವರ್ತುಲ ರಸ್ತೆ ಬಳಿ ನಡೆದಿದೆ.

ಇಂದು ಬೆಳಗ್ಗೆ ಈ ಭೀಕರ ಅಪಘಾತ ಸಂಭವಿಸಿದ್ದು, ಕೆ.ಆರ್.ಪುರ ನಿವಾಸಿಯಾಗಿರುವ ಶಿವಕುಮಾರ್ ತನ್ನ ಪತ್ನಿ ಹಾಗೂ ಮಗುವಿನ ಜೊತೆ ಬೈಕ್ ನಲ್ಲಿ ಧರ್ಮಪುರಿಗೆ ಹೊರಟಿದ್ದರು. ಈ ವೇಳೆ ಮಾರತ್ ಹಳ್ಳಿ ಹೊರವರ್ತುಲ ರಸ್ತೆ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಶಿವಕುಮಾರ್ ಎಡಭಾಗದಲ್ಲಿ ಬಿದ್ದಿದ್ದಾರೆ. ಪತ್ನಿ ಶ್ರೀದೇವಿ ಹಾಗೂ ಒಂದು ವರ್ಷದ ಗಂಡು ಮಗು ದೀಕ್ಷಿತ್ ರಸ್ತೆ ಬಲಭಾಗದಲ್ಲಿ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಮೇಲೆ ಲಾರಿ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶಿವಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ಘಟನೆಯಲ್ಲಿ ಅವರ ಮೊಬೈಲ್ ಸಹ ಕಳ್ಳತನವಾಗಿದೆ. ಹೆಂಡತಿ-ಮಗುವಿನ ತಲೆ ಅಪ್ಪಚ್ಚಿ ಆಗಿರೋದನ್ನು ನೋಡಿ ಅಘಾತಕ್ಕೊಳಗಾದ ಶಿವಕುಮಾರ್ ಏನು ಮಾಡಬೇಕೆಂದು ತೋಚದೆ ಹೆಂಡತಿ-ಮಗುವಿನ ಶವವನ್ನು ಅಪ್ಪಿ ರೋದಿಸುತ್ತಿದ್ದರು. ಅಲ್ಲಿದ್ದ ಸ್ಥಳೀಯರು ಕೂಡ ಸಹಾಯಕ್ಕೆ ಬರಲಿಲ್ಲ.

ಶಿವಕುಮಾರ್ ಮೂಲತಃ ತಮಿಳುನಾಡಿನ ಧರ್ಮಪುರಿ ಮೂಲದವರಾಗಿದ್ದಾರೆ. ಘಟನೆ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಶಿವಕುಮಾರ್ ಅವರ ಪತ್ನಿ ಮತ್ತು ಮಗುವಿನ ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಎಚ್.ಎ.ಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.