ಭಜನೆ ಮನುಷ್ಯನನ್ನು ದೈವತ್ವದ ಕಡೆಗೆ ಕರೆದೊಯ್ಯುವ ಸಾಧನ : ಡಾ|| ಹೆಚ್.ಎಲ್.ನಾಗರಾಜ್.

69
firstsuddi

ಚಿಕ್ಕಮಗಳೂರು : ಭಜನೆ ಮನುಷ್ಯನನ್ನು ದೈವತ್ವದ ಕಡೆಗೆ ಕರೆದೊಯ್ಯುವ ಪ್ರಮುಖವಾದ ಸಾಧನ ಎಂದು ಉಪವಿಭಾಗಾಧಿಕಾರಿ ಡಾ|| ಹೆಚ್.ಎಲ್.ನಾಗರಾಜ್ ಹೇಳಿದರು.
ಜಿಲ್ಲಾ ಜಾನಪದ ತೃತೀಯ ಸಮ್ಮೇಳನದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಜೆ.ಪಿ.ಯಶೋಧಮ್ಮ ರಾಮೇಗೌಡ ಸ್ಮರಣಾರ್ಥ ಇಂದು ಆಯೋಜಿಸಿದ್ದ ಭಜನಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಭಜನೆ ಮನಸ್ಸಿನ ಕಲ್ಮಶಗಳನ್ನು ತೊಳೆದು ಮನಸ್ಸನ್ನು ಶುದ್ದಗೊಳಿಸುತ್ತದೆ ಮನುಷ್ಯನನ್ನು ಆಧ್ಯಾತ್ಮಿಕವಾಗಿ ಬೆಳೆಸಿ ಭಗವಂತನ ಸಾಮೀಪ್ಯಕ್ಕೆ ಕರೆದೊಯ್ಯುತ್ತದೆ, ಮಾನಸಿಕ ಶಾಂತಿ ನೆಮ್ಮದಿ ನೀಡುತ್ತದೆ ಎಂದರು.

ಅನಾದಿ ಕಾಲದಿಂದ ಹಳ್ಳಿಹಳ್ಳಿಗಳಲ್ಲಿ ಭಜನಾ ತಂಡಗಳಿದ್ದವು, ಗ್ರಾಮೀಣರೆಲ್ಲರೂ ಸೇರಿ ಸಾಮೂಹಿಕವಾಗಿ ಭಜನೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಭಜನೆ ಮಾಡಲು ನಾಚಿಕೆ ಮತ್ತು ಮುಜುಗರ ಪಡುತ್ತಿರುವುದರಿಂದಾಗಿ ಭಜನಾ ತಂಡಗಳು ಕ್ಷೀಣಿಸುತ್ತಿವೆ ಎಂದು ವಿಷಾದಿಸಿದರು.

ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಎಲ್ಲಿಂದಲೋ ಬಂದಿದ್ದಲ್ಲ, ಅದು ಈ ನೆಲದ ಸಂಸ್ಕøತಿ, ನಮ್ಮ ಪೂರ್ವಿಕರು ಶ್ರಮದ ದುಡಿಮೆಯ ನಡುವೆ ಕಟ್ಟಿ ಬೆಳೆಸಿದ ಜಾನಪದವನ್ನು ಉಳಿಸಿ ಬೆಳೆಸಿದರೆ ಮಾತ್ರ ದೇಶದ ಸಂಸ್ಕøತಿ ಉಳಿಯುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜಿಲ್ಲೆಯಲ್ಲಿ ಈ ಹಿಂದೆ ವಿಜೃಂಭಿಸುತ್ತಿದ್ದ ಭಜನಾ ತಂಡಗಳು ಇತ್ತೀಚಿನ ವರ್ಷಗಳಲ್ಲಿ ಕ್ಷೀಣಿಸುತ್ತಿದ್ದು ಅದನ್ನು ಉಳಿಸಿ ಬೆಳೆಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 25 ಸಾವಿರ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 15 ಸಾವಿರ, ತೃತೀಯ ಸ್ಥಾನ ಪಡೆದವರಿಗೆ 10 ಸಾವಿರ ರೂ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.

ತಾಲ್ಲೂಕಿನ 35 ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಆಧ್ಬುತವಾಗಿ ಹಾಡುವ ಮೂಲಕ ಕೇಳುಗರ ಮನ ಗೆದ್ದವು, ಮಹಿಳಾ ತಂಡಗಳ ಭಜನೆ, ಭಕ್ತಿ ಗೀತೆಗಳ ಗಾಯನ ಗಮನ ಸೆಳೆದವು.

ಜಿ.ಪಂ. ಮಾಜಿ ಸದಸ್ಯ ಹಿರಿಗಯ್ಯ, ಕರ್ನಾಟಕ ಜಾನಪದ ಪರಿಷತ್ತಿನ ಉಪಾಧ್ಯಕ್ಷ ಜಿ.ಬಿ.ವಿರೂಪಾಕ್ಷ, ಡಾ|| ವಿನಾಯಕ ಸಿಂದಿಗೆರೆ, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ವೆಂಕಟೇಶ್ ಪೈ, ದಾಸ ಸಾಹಿತ್ಯ ಪ್ರಾಜಕ್ಟ್‍ನ ಜಿಲ್ಲಾ ಸಂಚಾಲಕ ಉದಯಸಿಂಹ, ಬಸವೇಶ್ವರ ಭಜನಾ ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ಬೇಲೂರಿನ ಸಂಗೀತ ವಿದ್ವಾನ್ ಶ್ರೀವತ್ಸ, ಕಲಾವಿದ ಮಂಜೇಶ್, ಪೂರ್ಣೇಶ್ ಕೆಸರಿಕೆ, ಬೆಳವಾಡಿ ಪ್ರಕಾಶ್, ಗಾಯಕಿ ಜ್ಯೋತಿ ವಿನೀತ್‍ಕುಮಾರ್ ಉಪಸ್ಥಿತರಿದ್ದರು.