ನವದೆಹಲಿ : ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರೆದಿದೆ. ಈ ಮಧ್ಯೆ ರಷ್ಯಾ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಸೆರ್ಗೆ ಲಾವ್ರೊವ್ ಭಾರತಕ್ಕೆ ಭೇಟಿ ನೀಡುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.
ಅಂದಹಾಗೆ ಸೆರ್ಗೆ ಲಾವ್ರೋವ್ ಅವರು ಮಾರ್ಚ್ 31ರಂದು ಭಾರತಕ್ಕೆ ಬರುವ ನಿರೀಕ್ಷೆಯಿದ್ದು, ಏಪ್ರಿಲ್ 1ರಂದು ಭಾರತದ ವಿದೇಶಾಂಗ ಇಲಾಖೆ ಸಚಿವ ಎಸ್.ಜೈಶಂಕರ್ ಜತೆ ಲಾವ್ರೋವ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಹಲವು ವಿಷಯಗಳು ಚರ್ಚೆಯಾಗಲಿವೆ. ಅದರಲ್ಲಿ ಮುಖ್ಯವಾಗಿ ಉಕ್ರೇನ್ ಬಿಕ್ಕಟ್ಟಿನ ಸಂಬಂಧ ವಿಸ್ತೃತ ಮಾತುಕತೆಯಾಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ ನಂತರ ಅಮೆರಿಕ, ಯುಕೆ ಸೇರಿ ಹಲವು ದೇಶಗಳು ರಷ್ಯಾವನ್ನು ಟೀಕಿಸುತ್ತಿವೆ. ಅಷ್ಟೇ ಅಲ್ಲದೇ ವಿವಿಧ ರೀತಿಯ ನಿರ್ಬಂಧ ವಿಧಿಸಿವೆ. ಆದರೆ ಭಾರತ ರಷ್ಯಾ-ಉಕ್ರೇನ್ ಯುದ್ಧ ವಿಚಾರದಲ್ಲಿ ತಟಸ್ಥ ನಿಲುವು ಕಾಯ್ದುಕೊಂಡು, ಶಾಂತಿಯುತವಾಗಿ ಬಿಕ್ಕಟ್ಟು ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡುತ್ತಲೇ ಬಂದಿದೆ. ಇದೀಗ ರಷ್ಯಾ ವಿದೇಶಾಂಗ ಇಲಾಖೆ ಸಚಿವ ಭಾರತಕ್ಕೆ ಆಗಮಿಸುತ್ತಿರುವುದು ಅತ್ಯಂತ ಮಹತ್ವ ಎನ್ನಿಸಿದೆ.










