ನವದೆಹಲಿ : ಎನ್ ಡಿಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಪ್ರಥಮ ಬುಡಕಟ್ಟು ಮಹಿಳೆ ಎಂಬ ಸಾಧನೆ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಎಲ್ಲರೂ ನಿರೀಕ್ಷಿಸಿದಂತೆಯೇ ದ್ರೌಪದಿ ಮುರ್ಮು ಭಾರತದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ವಿಪಕ್ಷ ನಾಯಕರು ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
ದ್ರೌಪದಿ ಮುರ್ಮು ಅವರಿಗೆ 5,121 ಮತಗಳು ಬಿದ್ದಿವೆ. ಈ ಮತಗಳ ಒಟ್ಟು ಮೌಲ್ಯ 5,77,777 ಆಗಿದೆ. ಇನ್ನು ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ 1,058 ಮತಗಳು ಬಿದ್ದಿದ್ದು ಇದರ ಮೌಲ್ಯ 2,61,062 ಆಗಿದೆ.
ದ್ರೌಪದಿ ಮುರ್ಮು ಯಾರು?
ದ್ರೌಪದಿ ಮುರ್ಮು 1958ರ ಜೂನ್ 20 ರಂದು ಒಡಿಶಾದ ಉಪರ್ಪೆಡದಲ್ಲಿ ಜನಿಸಿದರು. ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ದ್ರೌಪದಿ ಮುರ್ಮು ಅವರು ಬಿಎ ಪದವಿ ಪಡೆದಿದ್ದಾರೆ. ಇವರು ಪದವಿ ನಂತರ ಸಹಾಯಕ ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೇ ಒಡಿಶಾ ರಾಜ್ಯದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿಯಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡಿದ ಇವರು 1997ರಲ್ಲಿ ರಾಯ್ ರಂಗಪುರ ಪುರಸಭೆ ಸದಸ್ಯೆಯಾದರು. ಬಳಿಕ ಬಿಜೆಪಿ ಬುಡಕಟ್ಟು ಮೋರ್ಚಾ ಉಪಾಧ್ಯಕ್ಷೆಯಾಗಿದ್ದ ಮುರ್ಮು ಒಡಿಶಾದ ಬಿಜೆಪಿ-ಬಿಜೆಡಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿದ್ದರು. 6 ವರ್ಷ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ದ್ರೌಪದಿ ಮುರ್ಮು ಅವರು ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳು ಇದ್ದರು. ಇದರಲ್ಲಿ ಇಬ್ಬರು ಗಂಡು ಮಕ್ಕಳು ಮರಣ ಹೊಂದಿದ್ದಾರೆ. ಪತಿ ಸಹ ಸಾವನ್ನಪ್ಪಿದ್ದು, ಪುತ್ರಿ ಇತಿಶ್ರೀ ಮುರ್ಮು ಇದ್ದಾರೆ.
ಕೇವಲ 64ನೇ ವಯಸ್ಸಿನಲ್ಲಿ ದ್ರೌಪದಿ ಮುರ್ಮು ರಾಷ್ಟ್ರಪತಿ ಹುದ್ದೆ ಅಲಂಕಾರ ಮಾಡಿದ್ದು, ಸ್ವಾತಂತ್ರ ಭಾರತದ ನಂತರ ಹುಟ್ಟಿ ಈ ಪದವಿಗೇರಿರುವ ಮೊದಲ ಮಹಿಳೆ ಎಂಬ ಸಾಧನೆಗೂ ಪಾತ್ರರಾಗಿದ್ದಾರೆ. ಜುಲೈ 25 ರಂದು ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.










