ಭಾರತೀಯರಿಗೆ 3,000 ವೀಸಾ ಯೋಜನೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಚಾಲನೆ…

64
firstsuddi

ಲಂಡನ್ : ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಅವರು ಪ್ರತಿ ವರ್ಷ ಭಾರತದಿಂದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾಗಳಿಗೆ ಚಾಲನೆ ನೀಡಿದ್ದಾರೆ.

ಇಂದು ಯುಕೆ-ಭಾರತ ಯುವ ವೃತ್ತಿಪರರ ಯೋಜನೆಯನ್ನು ದೃಢೀಕರಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ, ಪದವಿ ಪಡೆದ 18ರಿಂದ 30 ವರ್ಷ ವಯಸ್ಸಿನ ಭಾರತೀಯರಿಗೆ ಪ್ರತಿ ವರ್ಷ 3,000 ವೀಸಾ ನೀಡಲಾಗುವುದು. ಈ ಯೋಜನೆಯಡಿ ವೀಸಾ ಪಡೆದವರು ಬ್ರಿಟನ್ ಗೆ ಬಂದು ಇಲ್ಲಿ ಕೆಲಸ ಮಾಡಬಹುದಾಗಿದೆ ಹಾಗೂ 2 ವರ್ಷಗಳ ವರೆಗೆ ವಾಸಿಸಬಹುದಾಗಿದೆ ಎಂದು ಬ್ರಿಟನ್ ಪ್ರಧಾನಿಗಳ ಕಾರ್ಯಾಲಯ ಟ್ವೀಟ್ ಮೂಲಕ ತಿಳಿಸಿದೆ.

ಜಿ-20 ಶೃಂಗಸಭೆಯ 17ನೇ ಆವೃತ್ತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಿಷಿ ಸುನಕ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ವೀಸಾ ನೀಡಿಕೆ ಯೋಜನೆ ಬಗ್ಗೆ ಬ್ರಿಟನ್ ಸರ್ಕಾರ ನಿರ್ಧಾರ ಪ್ರಕಟಿಸಿದೆ.

ಈ ಯೋಜನೆಯು ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ಎರಡೂ ದೇಶಗಳ ಆರ್ಥಿಕತೆಯನ್ನು ಬಲಪಡಿಸಲು ಸಹಕಾರಿಯಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಲವಾದ ಸಂಪರ್ಕಗಳನ್ನು ಹೊಂದುವ ಬ್ರಿಟನ್ ನ ಬದ್ಧತೆಗೆ ಪೂರಕವಾಗಿದೆ ಎಂದು ಡೌನಿಂಗ್ ಸ್ಟ್ರೀಟ್ ಹೇಳಿಕೆಯಲ್ಲಿ ತಿಳಿಸಿದೆ.