ಕೋಲ್ಕತ್ತಾ : ಪೌರತ್ವ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸರ ಗುಂಡೇಟಿನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಪೌರತ್ವ ತಿದ್ದುಪಡಿ ವಿರುದ್ಧ ಪ್ರತಿಭಟನೆಯ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಪೊಲೀಸರ ಗುಂಡಿಗೆ ಬಲಿಯಾದವರಿಗೆ ಘೋಷಣೆ ಮಾಡಿದ್ದ ಪರಿಹಾರ ಹಣವನ್ನು ವಾಪಾಸ್ ಪಡೆದುಕೊಂಡಿದೆ. ಆದರೆ ನಾವು ಮೃತರ ಕುಟುಂಬಕ್ಕೆ ತಲಾ 5ಲಕ್ಷ ರೂ ಪರಿಹಾರವನ್ನು ನೀಡುತ್ತೇವೆ ಎಂದು ತಿಳಿಸಿದರು. ಅಲ್ಲದೇ ಪ್ರಜಾಪ್ರಭುತ್ವದ ಹಕ್ಕಿಗಾಗಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರತಿಭಟನೆಯನ್ನು ಮುಂದುವರೆಸಬೇಕು ಎಂದು ಕರೆ ನೀಡಿದರು.










