ಮಂಗಳೂರು : ಪೌರತ್ವ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡದ ಹಿಂಸಾಚಾರದ ವೇಳೆ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ 10ಲಕ್ಷ ರೂ ಬಹುಮಾನ ಎಂಬ ನಕಲಿ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂದು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಸಿಎಬಿ ಮತ್ತು ಎನ್ಆರ್ಸಿ ಮಸೂದೆಯ ವಿರುದ್ಧವಾಗಿ ದಿನಾಂಕ ಡಿ.19 ರಂದು ಮಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ತೀವ್ರವಾಗಿ ಭಂಗ ಉಂಟಾಗಿದ್ದು, ಪ್ರತಿಭಟನಾ ನಿರತ ವ್ಯಕ್ತಿಗಳು ಪೊಲೀಸ್ ಅಧಿಕಾರಿ/ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟುಮಾಡಿರುತ್ತಾರೆ. ಆದ ಕಾರಣ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿರುತ್ತದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಹಗಲು ರಾತ್ರಿ ಅವಿರತ ಪರಿಶ್ರಮ ನಡೆಸಿರುತ್ತಾರೆ. ಆದ್ದರಿಂದ ಈ ಕೆಳಕಂಡ ಅಧಿಕಾರಿ/ ಸಿಬ್ಬಂದಿ ಅವರ ಶ್ಲಾಘನೀಯ ಸೇವೆಯನ್ನು ಗುರುತಿಸಿ ನಗದು ಬಹುಮಾನವನ್ನು ನೀಡಲಾಗಿದೆ ಎಂಬ ವಿಷಯವನ್ನು ಮಾನ್ಯರ ಅವಗಾಹನೆಗೆ ಈ ಮೂಲಕ ತರುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಅವರು ತಮ್ಮ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದು, ಕೆಲವು ಕಿಡಿಗೇಡಿಗಳು ಇಲಾಖೆಯ ಹೆಸರಿನಲ್ಲಿ ಸುಳ್ಳು ಸಂದೇಶವನ್ನು ರವಾನಿಸುತ್ತಿದ್ದಾರೆ. ಈ ಸುಳ್ಳು ಸಂದೇಶಗಳನ್ನು ಯಾರು ನಂಬಬೇಡಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.











