ಶಿವಮೊಗ್ಗ: ಮದ್ಯ ಸೇವಿಸುವ ವಿಷಯಕ್ಕೆ ಬಾರ್ ನಲ್ಲಿ ಗಲಾಟೆ ನಡೆದಿದ್ದು, ಬಾರ್ ಕ್ಯಾಶಿಯರ್ನನ್ನು ಹತ್ಯೆ ಮಾಡಿರುವ ಘಟನೆ ತಾಲೂಕಿನ ಆಯನೂರಿನ ನವರತ್ನ ಬಾರ್ ನಲ್ಲಿ ನಡೆದಿದೆ.
ಸಚಿನ್ (27) ಕೊಲೆಯಾದ ಯುವಕನಾಗಿದ್ದು, ಈತ ಬಾರ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದನು. ನಿರಂಜನ, ಸತೀಶ್ ಹಾಗೂ ಅಶೋಕ್ ನಾಯ್ಕ್ ಕೊಲೆ ಮಾಡಿದ ಆರೋಪಿಗಳು.
ನಿನ್ನೆ ಬಾರ್ಗೆ ಗಾಂಜಾ ಅಮಲಿನಲ್ಲಿ ಬಂದ ಮೂವರು, ಮದ್ಯ ಕೇಳಿದ್ದಾರೆ. ಅದಕ್ಕೆ ಕ್ಯಾಶಿಯರ್ ಸಚಿನ್, ಸಮಯ ಮುಗಿದಿದೆ ಮದ್ಯ ನೀಡಲು ಆಗುವುದಿಲ್ಲ ಎಂದಿದ್ದಾರೆ. ಇದರಿಂದ ಕೋಪಗೊಂಡ ಮೂವರು ಗಲಾಟೆ ಮಾಡಿದ್ದಾರೆ. ಗಲಾಟೆ ತಾರಕಕ್ಕೇರಿ ಸಚಿನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಇದರಿಂದ ಗಂಭೀರ ಗಾಯಗೊಂಡ ಸಚಿನ್ನನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಚಿನ್ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಕುಂಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










