ಮನೆಯೂಟ ಕೋರಿ ದರ್ಶನ್ ಮನವಿ – ಸೆ.5ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್…

52
firstsuddi

ಬೆಂಗಳೂರು: ಮನೆ ಊಟ ಕೋರಿ ದರ್ಶನ್ ಸಲ್ಲಿಸಲಾಗಿರುವ ಮನವಿಯ ಅರ್ಜಿಯನ್ನು ಹೈಕೋರ್ಟ್ ಸೆ.5ಕ್ಕೆ ಮುಂದೂಡಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಆರೋಗ್ಯ ಸಮಸ್ಯೆಯನ್ನು ಕಾರಣವನ್ನಾಗಿ ನೀಡಿ ಮನೆ ಊಟಕ್ಕೆ ಹಾಗೂ ಇತರೆ ಕೆಲವು ವಸ್ತುಗಳಿಗೆ ಬೇಡಿಕೆ ಇರಿಸಿದ್ದರು.

ಮನೆ ಊಟ ಹಾಗೂ ಇತರೆ ವಸ್ತುಗಳನ್ನು ಜೈಲಿಗೆ ತರಿಸಿಕೊಳ್ಳಲು ಅನುಮತಿ ಕೋರಿ ಹೈಕೋರ್ಟ್​ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಇಂದು ಹೈಕೋರ್ಟ್​ನ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು ಸೆಪ್ಟೆಂಬರ್ 5ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಆರೋಗ್ಯ ಸಮಸ್ಯೆ, ನಿದ್ರಾಹೀನತೆ ಕಾಡುತ್ತಿರುವುದಾಗಿ ಕಾರಣ ನೀಡಿ, ಮನೆ ಊಟ, ಹಾಸಿಗೆ, ಚಮಚ, ತಟ್ಟೆಗಳನ್ನು ತರಸಿಕೊಳ್ಳಲು ಅನುಮತಿ ಕೋರಿ ನಟ ದರ್ಶನ್ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಇಂದು ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಾಲಯಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಹಾಗೂ ದರ್ಶನ್ ಪರ ವಕೀಲ ಪ್ರಭುಲಿಂಗ ನಾವದಗಿ ಹಾಜರಾಗಿದ್ದರು.

ಮನೆಯೂಟಕ್ಕೆ ಅವಕಾಶ ನೀಡುವಂತೆ ದರ್ಶನ್ ಮಾಡಿದ್ದ ಮನವಿಯನ್ನು ಕಾರಾಗೃಹ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ತಿರಸ್ಕರಿಸಿದ್ದಾರೆ. ಮನವಿ ವಜಾಗೊಂಡ ಹಿನ್ನೆಲೆಯಲ್ಲಿ ವಾದ ಮಂಡನೆಗೆ ಅವಕಾಶ ಕೋರಿ ಪ್ರಭುಲಿಂಗ ನಾವದಗಿ ಮನವಿ ಮಾಡಿದರು. ನಾವದಗಿ ಮನವಿ ಪುರಸ್ಕರಿಸಿದ ಕೋರ್ಟ್ ಸೆ.5ಕ್ಕೆ ವಿಚಾರಣೆಯನ್ನು ಮುಂದೂಡಿದೆ.