ಮುಂಬೈ : ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಮತ್ತು ಎನ್ಸಿಪಿ ನಾಯಕ ಅನಿಲ್ ದೇಶಮುಖ್ಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಒಂದು ವರ್ಷದಿಂದ ಜೈಲು ಶಿಕ್ಷೆಗೆ ಒಳಗಾಗಿದ್ದ ದೇಶಮುಖ್ಗೆ ಇದೀಗ ರಿಲೀಫ್ ಸಿಕ್ಕಿದೆ.
ಅಕ್ರಮ ಹಣ ವರ್ಗಾವಣೆ ಹಾಗೂ 100 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣ ದಾಖಲಿಸಿಕೊಂಡ ಇಡಿ ಎನ್ಸಿಪಿ ನಾಯಕರಾದ ಅನಿಲ್ ದೇಶಮುಖ್ ಅವರನ್ನು ನವೆಂಬರ್ 2, 2021 ರಂದು ಬಂಧಿಸಿದ್ದರು. ಜಾಮೀನು ಕೋರಿ ಸಚಿವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಇಂದು ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಮಾರ್ಚ್ 2021 ರಲ್ಲಿ, ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಅವರು ಮುಂಬೈನ ರೆಸ್ಟೋರೆಂಟ್ ಗಳು ಮತ್ತು ಬಾರ್ ಗಳಿಂದ ತಿಂಗಳಿಗೆ 100 ಕೋಟಿ ರೂ. ಸಂಗ್ರಹಿಸಲು ಪೊಲೀಸ್ ಅಧಿಕಾರಿಗಳಿಗೆ ಟಾರ್ಗೆಟ್ ನೀಡಿದ್ದರು ಎಂದು ಆಗಿನ ಗೃಹ ಸಚಿವರಾಗಿದ್ದ ದೇಶಮುಖ್ ಮೇಲೆ ಆರೋಪಿಸಿದ್ದರು.










