ಮಹಾರಾಷ್ಟ್ರ ಸಚಿವ ಅನಿಲ್ ಪರಬ್‍ಗೆ ಇಡಿ ಶಾಕ್…

49
firstsuddi

ಮುಂಬೈ : ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್ ಅವರಿಗೆ ಜಾರಿ ನಿರ್ದೇಶನಾಲಯ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದೆ. ಮಹಾರಾಷ್ಟ್ರದ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ.

ಅನಿಲ್ ಪರಬ್ ಅವರ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪರಬ್ ಅವರ ಬಂಗಲೆ, ಮುಂಬೈ, ರತ್ನಗಿರಿ, ಪುಣೆ ಮತ್ತು ದಾಪೋಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ.

57 ವರ್ಷದ ಪರಬ್ ಮೂರು ಬಾರಿ ಶಿವಸೇನೆ ಶಾಸಕರಾಗಿದ್ದು, ರಾಜ್ಯ ಸಾರಿಗೆ ಸಚಿವರಾಗಿದ್ದಾರೆ. 2017 ರಲ್ಲಿ ರತ್ನಗಿರಿ ಜಿಲ್ಲೆಯ ದಾಪೋಲಿಯಲ್ಲಿ ಪರಬ್ ಅವರು 1 ಕೋಟಿ ರೂ.ಗೆ ಭೂಮಿಯನ್ನು ಖರೀದಿಸಿದ್ದರು. ನಂತರ 2019ರಲ್ಲಿ ಅದನ್ನು ನೋಂದಾಯಿಸಲಾಗಿತ್ತು.

ನಂತರ ಈ ಭೂಮಿಯನ್ನು ಮುಂಬೈ ಮೂಲದ ಕೇಬಲ್ ಆಪರೇಟರ್ ಸದಾನಂದ್ ಕದಮ್ ಅವರಿಗೆ 2020ರಲ್ಲಿ 1.10 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಈ ನಡುವೆ 2017ರಿಂದ 2020ರವರೆಗೆ ಇದೇ ಜಮೀನಿನಲ್ಲಿ ರೆಸಾರ್ಟ್ ನಿರ್ಮಿಸಲಾಗಿತ್ತು. ರೆಸಾರ್ಟ್ ನಿರ್ಮಾಣಕ್ಕೆ 6 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.