ಮಹಿಳೆಯರಿಗೆ ಋತುಚಕ್ರದ ರಜೆ : ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲು ನಿರಾಕರಿಸಿದ ಸುಪ್ರೀಂಕೋರ್ಟ್…

65
firstsuddi

ನವದೆಹಲಿ: ಭಾರತದಾದ್ಯಂತ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ/ಋತುಚಕ್ರದ ರಜೆಗಾಗಿ ನಿಯಮಗಳನ್ನು ರೂಪಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ.

ಶೈಲೇಂದ್ರ ಮಣಿ ತ್ರಿಪಾಠಿ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ, ವಿಷಯವು ನೀತಿ ನಿರ್ಧಾರದ ವ್ಯಾಪ್ತಿಯಲ್ಲಿದೆ. ನೀತಿಯ ದೃಷ್ಟಿಕೋನಗಳನ್ನು ಪರಿಗಣಿಸಿ, ಅರ್ಜಿದಾರರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಸಂಪರ್ಕಿಸಿದರೆ ಅದು ಸೂಕ್ತವಾಗಿರುತ್ತದೆ ಎಂದು ಹೇಳಿದೆ.

ಮುಟ್ಟಿನ ರಜೆ ನೀಡುವಂತೆ ನೀವು ಉದ್ಯೋಗದಾತರನ್ನು ಒತ್ತಾಯಿಸಿದರೆ, ಅದು ಮಹಿಳೆಯರನ್ನು ನೇಮಿಸಿಕೊಳ್ಳುವುದರಿಂದ ಅವರನ್ನು ವಿಮುಖಗೊಳಿಸಬಹುದು. ಅಲ್ಲದೆ, ಇದು ಸ್ಪಷ್ಟವಾಗಿ ನೀತಿ ವಿಷಯವಾಗಿದೆ. ಆದ್ದರಿಂದ, ನಾವು ಈ ಬಗ್ಗೆ ನಿರ್ಧರಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

1992ರ ವಿಶೇಷ ನೀತಿಯ ಭಾಗವಾಗಿ ಬಿಹಾರ ಮುಟ್ಟಿನ ರಜೆ ನೀಡುತ್ತಿದೆ. ಉಳಿದ ರಾಜ್ಯಗಳಲ್ಲಿ ಮಹಿಳೆಯರಿಗೆ ಋತುಚಕ್ರದ ನೋವಿನ ರಜೆ ಅಥವಾ ಅವಧಿ ರಜೆಯನ್ನು ನಿರಾಕರಿಸುವುದು ಸಂವಿಧಾನದ 14 ನೇ ವಿಧಿಯ ಅಡಿಯಲ್ಲಿ ಅವರ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಿಚಾರಣೆ ವೇಳೆ ವಾದಿಸಲಾಯಿತು.