ಬೆಂಗಳೂರು : ತನಿಖಾ ಹಂತದಲ್ಲಿರುವ ಪ್ರಕರಣಗಳ ಆರೋಪಿಗಳ ಭಾವಚಿತ್ರ, ವೈಯಕ್ತಿಕ ಮಾಹಿತಿ ಸೇರಿದಂತೆ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕಟ್ಟಪ್ಪಣೆ ವಿಧಿಸಿದೆ. ಹೈಕೋರ್ಟ್ ಸೂಚನೆ ಮೇರೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಅಂಥಹ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ ?
• ತನಿಖೆ ಪ್ರಗತಿಯಲ್ಲಿರುವಾಗ ಆರೋಪಿಗಳ ವೈಯಕ್ತಿಕ ವಿಷಯ, ಪಾತ್ರದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಬಾರದು.
• ಪ್ರಕರಣ ದಾಖಲಿಸಿಕೊಂಡ ನಂತರ ತನಿಖೆ ಮುಗಿದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವವರೆಗೆ ದೂರುದಾರರ ಬಗ್ಗೆ, ಆರೋಪಿಗಳ ಬಗ್ಗೆ ಮಾಹಿತಿ ನೀಡುವಂತಿಲ್ಲ.
• ಮಾಧ್ಯಮಗಳಿಗೆ ಮಾಹಿತಿ ಹಂಚಿಕೆ ಅಥವಾ ಸೋರಿಕೆ ವಿಷಯದಲ್ಲಿ ತನಿಖಾಧಿಕಾರಿಗಳಿಂದ ಲೋಪದೋಷ ಎಸಗುವುದು, ಮಾಹಿತಿ ನೀಡುವುದು ಕಂಡುಬಂದರೆ ಶಿಸ್ತು ಕ್ರಮದ ಜೊತೆಗೆ ಕ್ರಿಮಿನಲ್ ಮೊಕದ್ದಮೆಗೆ ಶಿಫಾರಸು ಮಾಡಲಾಗುವುದು.
• ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಪ್ರಕರಣ ಕುರಿತು ಎಫ್ ಐಆರ್ ದಾಖಲಾಗಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಬಹುದು.










