ಚಿತ್ರದುರ್ಗ: ಫೋಕ್ಸೋ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಅವರ ಜಾಮೀನು ರದ್ದುಗೊಳಿಸಿ, ನಾಲ್ಕು ತಿಂಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ.
ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಸೂಚನೆ ಕೂಡ ನೀಡಿದೆ. ಜೊತೆಗೆ ವಿಶೇಷ ಕೋರ್ಟ್ನಲ್ಲಿ ಸಂತ್ರಸ್ತ ಮಕ್ಕಳ ವಿಚಾರಣೆಗೆ ‘ಸುಪ್ರೀಂ’ ಆದೇಶಿಸಿದೆ. ಒಂದು ವೇಳೆ 4 ತಿಂಗಳೊಳಗೆ ವಿಚಾರಣೆ ಮುಗಿಯದಿದ್ದರೆ ಮತ್ತೆರಡು ತಿಂಗಳು ಜೈಲಿನಲ್ಲಿಯೇ ಇರಬೇಕಾಗುತ್ತದೆ.
ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಎಸ್ಜೆಎಂ ವಿದ್ಯಾಪೀಠದಲ್ಲಿನ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣ ಸಂಬಂಧ ಮುರುಘಾ ಮಠದ ಪೀಠಾಧ್ಯಕ್ಷ ಮುರುಘಾ ಶ್ರೀಯನ್ನು ಬಂಧಿಸಲಾಗಿತ್ತು. ಬಳಿಕ ಹೈಕೋರ್ಟ್ ಮುರುಘಾ ಶ್ರೀಗೆ ಷರತ್ತು ಬದ್ಧ ಜಾಮೀನು ನೀಡಿತ್ತು.
ಜಾಮೀನಿನ ಮೇಲೆ ಹೊರ ಬಂದ ಬಳಿಕ ಮುರುಘಾ ಶ್ರೀ ಮಠ ಮತ್ತು ಎಸ್ಜೆಎಂ ವಿದ್ಯಾಪೀಠದ ಆಡಳಿತ ನೋಡಿಕೊಳ್ಳಲು ಆರಂಭಿಸಿದ್ದನ್ನು ಪ್ರಶ್ನಿಸಿ ಮಾಜಿ ಸಚಿವ ಹೆಚ್ ಏಕಾಂತಯ್ಯ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮುರುಘಾ ಸ್ವಾಮಿ ಆಡಳಿತಕ್ಕೆ ನಿರ್ಬಂಧ ಹೇರಿತ್ತು. ಮುರುಘಾ ಮಠ ಮತ್ತು ಎಸ್ಜೆಎಂ ವಿದ್ಯಾಪೀಠಕ್ಕೆ ಮೂರು ದಿನಗಳಲ್ಲಿ ಸಮಿತಿ ರಚನೆ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಲಾಗಿತ್ತು.










