ಮೂಡಿಗೆರೆ : ಅನುಮತಿ ಪಡೆಯದೆ ರಾಣಿಝರಿ ಪ್ರಪಾತದ ಅಂಚಲ್ಲಿ ಪ್ರೀವೆಡ್ಡಿಂಗ್ ಫೋಟೋಶೂಟ್-ಕ್ರಮಕ್ಕೆ ಆಗ್ರಹ…

264
firstsuddi

ಕೊಟ್ಟಿಗೆಹಾರ ; ಸುಂಕಸಾಲೆ ಗ್ರಾ.ಪಂ ವ್ಯಾಪ್ತಿಯ ಬಲ್ಲಾಳರಾಯನ ದುರ್ಗದ ರಾಣಿಝರಿ ಪ್ರಪಾತದ ಅಂಚಲ್ಲಿ ಮಂಗಳವಾರ ಸಂಜೆ ಅರಣ್ಯ ಇಲಾಖೆ ಅನುಮತಿ ಪಡೆಯದೆ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಲಾಗಿದ್ದು ಅರಣ್ಯ ಇಲಾಖೆ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತ್ತಿದೆ.
ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ವೇಳೆ ತೆಪ್ಪ ಮಗುಚಿ ನವಜೋಡಿಗಳು ಮೃತಪಟ್ಟ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ಅಪಾಯಕಾರಿ ಸ್ಥಳಗಳಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡುವುದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದು, ಈ ಸಂದರ್ಭದಲ್ಲಿ ರಾಣಿಝರಿಯ ಪ್ರಪಾತದ ಅಂಚಿನಲ್ಲಿ ನವಜೋಡಿಗಳು ಮಂಗಳವಾರ ಫೋಟೋಶೂಟ್‍ನಲ್ಲಿ ತೊಡಗಿದ್ದರೂ ಕೂಡ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಾಣಿಝರಿ ಪ್ರಪಾತ, ದೇವರಮನೆ, ಚಾರ್ಮಾಡಿಘಾಟ್ ಶ್ರೇಣಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದ್ದು ಅರಣ್ಯದೊಳಗೆ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಕಡ್ಡಾಯ. ಆದರೆ ಹಾಡುಹಗಲೇ ನಾಲ್ಕೈದು ಜನರ ಗುಂಪು ಅಪಾಯಕಾರಿ ರಾಣಿಝರಿಯ ಪ್ರಪಾತದಂಚಿನಲ್ಲಿ ಪ್ರಿವೆಡ್ಡಿಂಗ್ ಫೋಟೋಶೂಟ್‍ನಲ್ಲಿ ತೊಡಗಿದ್ದರೂ ಕೂಡ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

‘ಈ ಕುರಿತು ಪ್ರತಿಕ್ರಯಿಸಿದ ಉಪವಲಯ ಅರಣ್ಯಾಧಿಕಾರಿ ಯಾಸಿನ್ ಅವರು ಈ ತಂಡ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಲು ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ. ಪ್ರಪಾತದ ಅಂಚಿನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಅಪಾಯಕಾರಿಯಾಗಿರುವುದರಿಂದ ಇದಕ್ಕೆ ಅನುಮತಿ ನೀಡುವುದಿಲ್ಲ’ ಎಂದರು.

‘ಬಳಿಕ ಮಾತನಾಡಿದ ಗ್ರಾಮಸ್ಥರಾದ ಅಭಿ ಅವರು ದುರ್ಗದಹಳ್ಳಿ, ದೇವರಮನೆ, ರಾಣಿಝರಿ ಮುಂತಾದ ಸ್ಥಳಗಳಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಲು ಅವಕಾಶ ನೀಡಬಾರದು. ರಾಣಿಝರಿಯ ಪ್ರಪಾತದ ಅಂಚಿನಲ್ಲಿ ಫೋಟೋ ಶೂಟ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.