ಮೂಡಿಗೆರೆ : ಕನ್ನಡ ಭಾಷೆ ಸಂಸ್ಕೃತಿ ಉಳಿವಿಗೆ ಕಂಕಣಬದ್ದರಾಗೋಣ- ಎಂ.ಪಿ ಕುಮಾರಸ್ವಾಮಿ.

179
firstsuddi

ಕೊಟ್ಟಿಗೆಹಾರ : ಕನ್ನಡ ನಾಡು ನುಡಿ ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರದಾಗಿದ್ದು, ಭಾಷೆ ಸಂಸ್ಕೃತಿ ಉಳಿವಿಗೆ ಕಂಕಣಬದ್ದರಾಗೋಣ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದರು.
ಆಲೇಕಾನ್ ಗ್ರಾಮದಲ್ಲಿ ಮೂಡಿಗೆರೆ ತಾಲ್ಲೂಕು ಕಸಾಪ ಮತ್ತು ಬಣಕಲ್ ಹೋಬಳಿ ಕಸಾಪ ವತಿಯಿಂದ ನಡೆದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ನಾಡು ನುಡಿಯ ಏಳಿಗೆಗೆ ಕವಿಗಳ ಕೊಡುಗೆ ಅಪಾರ. ಕನ್ನಡ ಭಾಷೆ ಹಾಗೂ ನಾಡಿನ ವೈಭವವನ್ನು ನೇಕ ಕವಿಗಳು ತಮ್ಮ ಪದಪುಂಜಗಳಲ್ಲಿ ಬಹುಸುಂದರವಾಗಿ ವರ್ಣಿಸಿದ್ದಾರೆ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಅವರು ಮಲೆನಾಡು ಭಾಗದಲ್ಲಿ ಕನ್ನಡ ಭಾಷೆ ಕುತ್ತು ಬಂದಿಲ್ಲ. ಗಡಿನಾಡಿನಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ನಿರಂತರವಾಗಿರಬೇಕಿದೆ. ಅದಕ್ಕಾಗಿ ಎಲ್ಲ ವ್ಯಕ್ತಿಗಳು, ಸಂಘಟನೆಗಳು ಐಕ್ಯಭಾವದಿಂದ ಹೋರಾಟ ನಡೆಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ಬಣಕಲ್ ಕಸಾಪ ಅಧ್ಯಕ್ಷ ವಸಂತ್ ಹಾರ್‍ಗೋಡ್ ಅವರು ಮಾತನಾಡಿ ಕನ್ನಡದ ಬಗ್ಗೆ ಕಾಳಜಿ ಮತ್ತು ಕಳಕಳಿ ಇಟ್ಟುಕೊಂಡವರು ಕನ್ನಡದಲ್ಲೆ ವ್ಯವಹಾರ ಮಾಡುವುದನ್ನು ರೂಡಿಸಿಕೊಳ್ಳಬೇಕು. ಪರಭಾಷೆಗಳು ಪ್ರಭಾವ ಬೀರಿದರೂ ನಮ್ಮ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು ಎಂದರು.
ಈ ಸಂದರ್ಭದಲ್ಲಿ ಮಲ್ನಾಡ್ ಗಲ್ಪ್ ಅಸೋಸಿಯೇಷನ್ ತಾಲ್ಲೂಕು ಅಧ್ಯಕ್ಷ ಹಮೀದ್ ಸಬ್ಬೇನಹಳ್ಳಿ, ಗಾಯಕ ಬಕ್ಕಿ ಮಂಜುನಾಥ್, ಕಸಾಪ ಪಧಾಧಿಕಾರಿಗಳಾದ ಭಕ್ತೇಶ್,ಅನಿಲ್, ಸಂತೋಷ್, ಸಂಜಯ್ ಗೌಡ, ಪಿ.ಕೆ ಮಂಜುನಾಥ್, ಜಾವಳಿ ಗ್ರಾಮ ಪಂಚಾಯತಿ ನೂತನ ಸದಸ್ಯ ಸಂದೀಪ್, ಆಲೇಕಾನ್ ಗ್ರಾಮದ ಹಿರಿಯರಾದ ರಾಮಯ್ಯ, ಹಾಗೂ ಆಲೇಕಾನ್ ಗ್ರಾಮಸ್ಥರು ಇದ್ದರು.