ಕೊಟ್ಟಿಗೆಹಾರ : ಕೋವಿಡ್ ಎರಡನೇ ಅಲೆಯು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಣಕಲ್‍ನಲ್ಲಿ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ಹಾಗೂ ಅಂಗಡಿ ಮುಂಗಟ್ಟುಗಳ ಮುಂದೆ ಗುಂಪು ಗೂಡಿ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಲಾಠಿ ಬೀಸಿದ ಘಟನೆ ಇಂದು ನಡೆಯಿತು.
ಬಣಕಲ್‍ನಲ್ಲಿ ಸಂತೆ ದಿನವಾದ್ದರಿಂದ ಜನರು ದಿನಸಿ ಪಡೆದುಕೊಳ್ಳಲು ಅಂಗಡಿಗಳ ಮುಂದೆ ಜನ ಅಂತರ ಕಾಯ್ದುಕೊಳ್ಳದೇ ಗುಂಪುಗೂಡಿದ್ದರು. ಅಂಗಡಿ ಮಾಲಿಕರು ಕೂಡ ನಿಯಮ ಉಲ್ಲಂಘಿಸಿದ್ದರಿಂದ ಪೊಲೀಸರು ಕೆಲವು ಅಂಗಡಿಗಳಿಗೆ ಕೇಸು ದಾಖಲಿಸಿ ಜಾಗೃತಿ ಮೂಡಿಸಿದರು.
ನಿಯಮ ಉಲ್ಲಂಘಿಸಿದ್ದರಿಂದ ಬ್ಯಾಂಕುಗಳಿಗೆ ತೆರಳಿ ವಾಪಾಸ್ ಮರಳುತ್ತಿದ್ದ ಕೆಲ ಜನರಿಗೆ ಲಾಠಿಯ ಬಿಸಿ ತಟ್ಟಿತು. ಬ್ಯಾಂಕ್ ಎಟಿಎಂ ಪಕ್ಕದಲ್ಲಿ ಜನರು ಜಮಾಯಿಸಿದ್ದರಿಂದ ಅವರಿಗೂ ಸಾಮಾಜಿಕ ಅಂತರ ಕಾಯುಕೊಳ್ಳಲು ಪೊಲೀಸರು ಸೂಚಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಬಣಕಲ್ ಠಾಣಾಧಿಕಾರಿ ವಿ.ಶ್ರಿನಾಥ್ ರೆಡ್ಡಿ, ಅನಗತ್ಯವಾಗಿ ಓಡಾಡುತ್ತಿದ್ದ ಕೆಲವರ ಬೈಕ್, ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಬಣಕಲ್‍ನಲ್ಲಿ ನಿಯಮ ಉಲ್ಲಂಘಿಸಿದ ಮೂರು ಅಂಗಡಿಗಳು ಹಾಗೂ ಕೊಟ್ಟಿಗೆಹಾರ ದೇವನಗೂಲ್ ಬಳಿಯ ಒಂದು ಅಂಗಡಿ ಮೇಲೆ ಕೇಸ್ ಹಾಕಿ ದಂಡ ವಿಧಿಸಲಾಗಿದೆ. ಅಂಗಡಿ ಮಾಲಿಕರು ಅಂಗಡಿ ಮುಂದೆ ಅಂತರ ಕಾಪಾಡುವ ವೃತ್ತಗಳನ್ನು ಹಾಕಿ ದಿನಸಿ ನೀಡಬೇಕು. ಸೋಂಕು ತಡೆಯಲು ಸರ್ವರ ಸಹಕಾರ ಅಗತ್ಯವಿದೆ. ತರಕಾರಿಗಳನ್ನು ಹಳ್ಳಿಗಳಿಗೆ ಪಿಕಾಪ್ ಅಥವಾ ತಳ್ಳುವ ಗಾಡಿ ಮೂಲಕ ವ್ಯಾಪಾರ ನಡೆಸಿದರೆ ಜನ ಸಂದಣಿಯನ್ನು ತಡೆಯಬಹುದು. ವರ್ತಕರಿಗೆ ಈ ಬಗ್ಗೆ ಸೂಚಿಸಲಾಗಿದೆ ಎಂದರು.










