ಮೂಡಿಗೆರೆ : ಡಿ.ಕೆ. ಶಿವಕುಮಾರ್ ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯನ ಮನಸ್ಥಿತಿಯಲ್ಲಿದ್ದಾರೆ ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿ ಅವರು ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯನ ಮನಸ್ಥಿತಿಯಲ್ಲಿದ್ದಾರೆ. ಈಗಲೂ ಹೊರಗೆ ಬಂದಿಲ್ಲ. ತನಿಖೆ ನಡೆಯುವ ಹಂತದಲ್ಲೇ ಧಮ್ಕಿ ಹಾಕುವುದು ಸರಿಯಲ್ಲ. ತಾವು ಕೊತ್ವಾಲ್ ರಾಮಚಂದ್ರನ ಶಿಷ್ಯ ಅಂತಾ ಸರ್ಕಾರದಲ್ಲಿ ಗೂಂಡಾಗಳಂತೆ ಧಮ್ಕಿ ಹಾಕಲು ಅವಕಾಶವಿಲ್ಲ. ಡಿ.ಕೆ. ಶಿವಕುಮಾರ್ ಅವರು ಗೂಂಡಾ ಮನಸ್ಥಿತಿಯಿಂದ ಹೊರಬರಬೇಕು. ಇಲ್ಲದಿದ್ದರೆ ನಿಮಗೂ ನಿಮ್ಮ ಪಕ್ಕಕ್ಕೂ ಕೆಟ್ಟ ಹೆಸರು ಎಂದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಂಗ್ಯವಾಡಿದ ಸಚಿವ ಸಿ.ಟಿ. ರವಿ ಅವರು, ಹಿಟ್ಟು ಹಳಸಿತ್ತು, ಡ್ಯಾಶ್ ಹಳಸಿತ್ತು. ಕಾಂಗ್ರೆಸ್‍ನವರಿಗೆ ಗಾಂಧಿ ಕುಟುಂಬವನ್ನು ಬಿಟ್ಟರೆ ಬೇರೆ ಗತಿಯಿಲ್ಲ. ಹಾಗಾಗಿಯೇ ಅಧ್ಯಕ್ಷಗಾದಿಯತ್ತ ಗಾಂಧಿ ಕುಟುಂಬವನ್ನೇ ಅವಲಂಬಿಸಿಕೊಂಡಿದ್ದಾರೆ ಎಂದರು.










