ಮೂಡಿಗೆರೆ : ತಾ.ಪಂ. ಸಾಮಾನ್ಯ ಸಭೆ : ಪ್ರಗತಿ ಪರಿಶೀಲನೆ…

495
firstsuddi

ಮೂಡಿಗೆರೆ : ತಾ.ಪಂ.ಆವರಣದಲ್ಲಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ತಾ.ಪಂ. ಕಾರ್ಯ ನಿರ್ವಾಹಕ ಅಧ್ಯಕ್ಷ ಕೆ.ಸಿ.ರತನ್ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು.
ಇತ್ತೀಚೆಗೆ ಜಿ.ಹನುಮನಹಳ್ಳಿಯಲ್ಲಿ ಕಲುಷಿತ ನೀರು ಸೇವೆನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 15ಕ್ಕೂ ಹೆಚ್ಚು ಗ್ರಾಮಸ್ಥರ ಶುಶ್ರೂಷೆ ವಿಚಾರದಲ್ಲಿ ವೈದ್ಯಕೀಯ ಸಿಬ್ಬಂದಿಗಳು ನಡೆದುಕೊಂಡ ರೀತಿಯ ಬಗ್ಗೆ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ.ಅಧ್ಯಕ್ಷ ಕೆ.ಸಿ ರತನ್ ಅವರು, ವೈದ್ಯರುಗಳು ರೋಗಿಗಳನ್ನು ಅಸ್ಪೃಶ್ಯರ ರೂಪದಲ್ಲಿ ನೋಡುತ್ತಿದ್ದಾರೆ. ಚಿಕಿತ್ಸೆ ಬಯಸಿ ದೇವಸ್ಥಾನ ಎಂಬ ಮನಸ್ಥಿತಿಯಿಂದ ಜನರು ಬಂದಾಗ ಅವರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿವೆ. ಸರಕಾರ ನಿಮ್ಮನ್ನು ನೇಮಿಸಿರುವುದು ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡುವುದಕ್ಕಾಗಿಯೇ ಹೊರತು ನಿಮ್ಮನ್ನು ಕುಳ್ಳಿರಿಸಿ ಸಂಬಳ ನೀಡುವುದಕ್ಕಲ್ಲ. ನಿಮ್ಮ ಇಲಾಖೆಯ ಸಿಬ್ಬಂದಿಗಳ ಬಗ್ಗೆ ಪದೇ ಪದೇ ದೂರುಗಳು ಕೇಳಿಬರುತ್ತಿವೆ. ಎಚ್ಚರ ವಹಿಸಿ ಕೆಲಸ ಮಾಡದಿದ್ದಲ್ಲಿ ಕಠಿಣಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲಾಗುವುದು ಎಂದು ಎಚ್ಚರಿಸಿದರು.
ಕೆ.ಎಸ್.ಆರ್.ಟಿ.ಸಿ ನಿಗಮದ ಘಟಕದ ಅಧಿಕಾರಿಗಳು ಚಾರ್ಮಾಡಿಘಾಟ್ ಮುಖಾಂತರ ಉಜಿರೆ ಮಾರ್ಗಕ್ಕೆ ಮಂಗಳೂರು ವಿಭಾಗದಿಂದ 4 ಮಿನಿ ಬಸ್ಸುಗಳು ಹಾಗೂ ಮೂಡಿಗೆರೆ ಘಟಕದಿಂದ 2 ಮಿನಿ ಬಸ್ಸುಗಳನ್ನು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಎಂ.ಜಿ.ಎಂ ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ತಜ್ಞರು ಸ್ವತಃ ಚಿಕಿತ್ಸೆ ಮಾಡಲು ವಿಫಲರಾಗಿರುವುದರಿಂದ ಸದರಿ ವೈದ್ಯರನ್ನು ಬೇರೆಗೆ ಸ್ಥಳಾಂತರಿಸಿ ನುರಿತ ವೈದ್ಯರನ್ನು ನೇಮಕಮಾಡುವಂತೆ ಪತ್ರ ಬರೆಯಲಾಗಿದೆ ಹಾಗೂ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಸತಿಗೃಹಗಳನ್ನು ಉದ್ಘಾಟನೆ ಮಾಡಿಕೊಡಬೇಕೆಂದು ಮೂಡಿಗೆರೆ ಶಾಸಕರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಕೆ.ಆರ್.ಐ.ಡಿ.ಎಲ್ ಸಂಸ್ಥೆಯಿಂದ ನಿರ್ಮಾಣ ಮಾಡಿರುವ ಶುದ್ಧಗಂಗಾ ಘಟಕಗಳನ್ನು ನಮ್ಮ ಇಲಾಖೆಗೆ ಹಸ್ತಾಂತರಿಸಿದ್ದು ಶಾಸಕರಿಂದ ಶೀಘ್ರವಾಗಿ ಉದ್ಘಾಟನೆ ಮಾಡಿಸುವುದಾಗಿ ತಿಳಿಸಿದರು. ನಂದೀಪುರ ಗಾ.ಪಂ. ವ್ಯಾಪ್ತಿಯ ಗೌರಿಕೆರೆ ಗ್ರಾಮದಲ್ಲಿ ಹೊಸ ಬೋರ್ ವೆಲ್ ಕೊರೆಯಿಸಲು ಕಾಮಗಾರಿ ನಿರ್ವಹಣೆ ಮಾಡಲಾಗುವುದು ಎಂಬ ಉತ್ತರಕ್ಕೆ ಸಭೆಯಲ್ಲಿ ನಿಧಾನಗತಿಯ ಕಾರ್ಯಕ್ಕೆ ಆಕ್ಷೇಪ ವ್ಯಕ್ತವಾಯಿತು.
2019ರಲ್ಲಿ ಅತೀವೃಷ್ಟಿಯಿಂದಾಗಿ ಸಂಪೂರ್ಣವಾಗಿ ಹಾಳಾಗಿದ್ದ ಸಂಸೆ ರಸ್ತೆಯನ್ನು ಅಭಿವೃದ್ಧಿಪಡಿಸದಿರುವ ಪಂಚಾಯತ್‍ರಾಜ್ ಇಲಾಖೆಯ ಅಧಿಕಾರಿಗಳಿಗೆ ತೀವ್ರತರಾಟೆಗೆ ತೆಗೆದುಕೊಳ್ಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಮುಂದಿನ ಸಭೆಯ ಒಳಗೆ ಕಾಮಗಾರಿ ಮುಗಿದಿರುವ ಮಾಹಿತಿ ನೀಡುವುದಾಗಿ ತಿಳಿಸಿದರು. ಕಳೆದ ಬಾರಿಯ ಸಭೆಯಲ್ಲಿ ತ್ರಿಪುರಾ ಅಧ್ಯಕ್ಷರು ದೇವರಮನೆ ದೇವಸ್ಥಾನದಲ್ಲಿ ಇಂಟರ್ ಪೋಲ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಪ್ರಸ್ತಾವಿಸಿದ ವಿಷಯಕ್ಕೆ ಮೆಸ್ಕಾಂ ಅಧಿಕಾರಿಗಳು ದೇವರಮನೆ ದೇವಸ್ಥಾನಕ್ಕೆ ಮಧ್ಯಂತರ ಕಂಬ ಅಳವಡಿಸಲು ಅಂದಾಜು ಪಟ್ಟಿಯನ್ನು ತಯಾರಿಸಿದ್ದೇವೆ ಎಂಬ ಉತ್ತರಕ್ಕೆ ಸದಸ್ಯರುಗಳು ಗರಂ ಆದರು. ಬಳಿಕ ಮಾತನಾಡಿದ ತಾ.ಪಂ.ಅಧ್ಯಕ್ಷರು ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗದ ಸಾಮಾನ್ಯ ನಾಗರೀಕರು ಮತ್ತುಕೃಷಿಕರ ಮೇಲೆ ಮಾತ್ರ ನಿಮ್ಮ ಪೌರುಷ ತೋರಿಸುತ್ತೀರ. ನಿಮಗೆ ವಹಿಸಿದ ಕೆಲಸ ಮಾಡಲು ಮಾತ್ರ ಹಿಂದೇಟು ಹಾಕುತ್ತೀರ. ರೈತರು ಸುಧಾರಿಸಿಕೊಳ್ಳುವವರೆಗೂ ಯಾವುದೇ ಕೃಷಿಕರ ಪಂಪ್ ಸೆಟ್ ವಿದ್ಯುತ್ ಸ್ಥಗಿತಗೊಳಿಸಬಾರದು ಮತ್ತು ವಹಿಸಿರುವ ಕೆಲಸ ಮುಂದಿನ ಸಭೆಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಸಹಕಾರಿಸಂಘ ಕೃಷಿ ಪತ್ತಿನ ಸಂಘದ ಚುನಾವಣೆಯಲ್ಲಿ ಜಯಶೀಲರಾದ ತಾ.ಪಂ.ಸದಸ್ಯರಾದ ಬಿ.ಎಲ್.ದೇವರಾಜ್, ಭಾರತೀರವೀಂದ್ರ ಹಾಗೂ ಜಿ.ಪಂ. ಸದಸ್ಯ ಶ್ಯಾಮಣ್ಣ ಬಣಕಲ್ ಅವರಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು. ಸಭೆಯಲ್ಲಿ ಕೃಷಿ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ, ತಾಲ್ಲೂಕು ಆರೋಗ್ಯ ಅಧಿಕಾರಿಗಳು, ತಾ.ಪಂ. ಸದಸ್ಯರುಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.