ಮೂಡಿಗೆರೆ : ನಾರಾಯಣ ಗುರುಗಳ ಚಿಂತನೆಗಳು ಕೇವಲ ಒಂದು ಜಾತಿಗೆ ಸೀಮಿತವಾಗದಿರಲಿ : ರಾಮಚಂದ್ರ.

107
firstsuddi

ಕೊಟ್ಟಿಗೆಹಾರ : ನಾರಾಯಣ ಗುರುಗಳ ಚಿಂತನೆಗಳು ಕೇವಲ ಒಂದು ಜಾತಿಗೆ ಸೀಮಿತವಾಗದಿರಲಿ. ಎಲ್ಲಾ ವರ್ಗದ ಶೋಷಿತರ ಏಳಿಗೆಗಾಗಿ ಶ್ರಮಿಸಿದ ಗುರುಗಳ ತತ್ವ ಚಿಂತನೆಗಳು ಮನೆಮನೆಗಳನ್ನು ತಲುಪಬೇಕಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರು ಮಲಯಾಳಿ ಸಂಘದ ವತಿಯಿಂದ ಬಣಕಲ್‍ನಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವಿಯತೆಯೂ ಶ್ರೀನಾರಾಯಣಗುರುಗಳ ಚಿಂತನೆಯ ಕೇಂದ್ರಬಿಂದುವಾಗಿತ್ತು. ಅವರ ಜಯಂತಿಯಂದು ಅವರ ಭಾವಚಿತ್ರಕ್ಕೆ ಪೂಜಿಸುವ ಜೊತೆಗೆ ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. ಸಮಾಜದಲ್ಲಿದ್ದ ಅಸಮಾನತೆ, ಜಾತಿ ವೈಷಮ್ಯ, ತಾರತಮ್ಯಗಳ ವಿರುದ್ದ ಹೋರಾಟ ನಡೆಸಿದ್ದಾರೆ ಎಂದರು.

ಸಂಘದ ಗೌರವಾಧ್ಯಕ್ಷ ಈಶ್ವರ್ ಬಾಳೂರು ಮಾತನಾಡಿ, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಕಲ್ಪನೆಯನ್ನು ಮೂಡಿಸಿ ಅದನ್ನು ಜನಮನಕ್ಕೆ ಹರಡಿದ ಶ್ರೀನಾರಾಯಣ ಗುರುಗಳು ಶಾಸ್ತ್ರಗಳನ್ನು ಓದಿ, ಅದನ್ನು ಅರ್ಥೈಸಿಕೊಂಡೆ ರೂಡಿಗಳನ್ನು ಪ್ರಶ್ನಿಸಿದರು. ಅವರು ದೇವರನ್ನು ನಿರಾಕರಿಸಲಿಲ್ಲ ಎಂದರು.

ಸಂಘದ ಗೌರವಾಧ್ಯಕ್ಷ ವೇಲಾಯುಧನ್ ಮಾತನಾಡಿ ನವಭಾರತದ ಆಶಾಕಿರಣವಾಗಿ ಬಂದ ಆಧ್ಯಾತ್ಮಿಕ ಗುರು ಶ್ರೀನಾರಾಯಣಗುರುಗಳು ಶೋಷಿತ ವರ್ಗದ ಧ್ವನಿಯಾಗಿ ಅವರ ಸರ್ವತೋಮುಖ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಬ್ರಹ್ಮಶ್ರೀ ನಾರಾಯಣ ಗುರು ಮಲಯಾಳಿ ಸಂಘದ ಪಧಾಧಿಕಾರಿಗಳು ಹಾಜರಿದ್ದರು.