ಮೂಡಿಗೆರೆ : ಬಾಗಿಲು ಹಾಕಿದ ಬ್ಯಾಂಕ್ ಎ.ಟಿ.ಎಂ ಹಾಗೂ ಬ್ಯಾಂಕಿನ ವ್ಯವಹಾರಗಳ ಬಗ್ಗೆ ಗ್ರಾಹಕರ ಅಸಮಾಧಾನ…

587
firstsuddi

ಮೂಡಿಗೆರೆ : ಪಟ್ಟಣದ ಬಿಳಗುಳದಲ್ಲಿರುವ ವಿಜಯಬ್ಯಾಂಕ್ (ಬ್ಯಾಂಕ್ ಆಫ್ ಬರೋಡಾ) ಎ.ಟಿ.ಎಂ ನಾಲ್ಕು ದಿನಗಳಿಂದ ಬಾಗಿಲು ಹಾಕಿದ್ದು, ತುರ್ತು ಅವಶ್ಯಕತೆಗಾಗಿ ಬ್ಯಾಂಕ್ ಕಡೆ ಮುಖ ಮಾಡಿದ ಗ್ರಾಹಕರು ಬ್ಯಾಂಕ್ ಸಿಬ್ಬಂದಿಗಳಿಗೆ ಹಿಡಿಶಾಪ ಹಾಕಿಕೊಂಡು ಹಿಂತಿರುಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಮುಗಿದ ನಂತರ ವಿಜಯಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾದ ಜೊತೆಗೆ ವಿಲೀನಗೊಳಿಸಿದ್ದು ಗ್ರಾಹಕರಿಗೆ ಇನ್ನೂ ಉತ್ತಮ ಮಟ್ಟದ ಸೇವೆ ಲಭ್ಯವಾಗಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ ಪರಿಸ್ಥಿತಿ ಮಾತ್ರ ಮೊದಲಿಗಿಂತಲೂ ತೀರಾ ಹದಗೆಟ್ಟಿದ್ದು ಬ್ಯಾಂಕಿನ ಗ್ರಾಹಕರು ಬ್ಯಾಂಕಿನ ಸೇವೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬ್ಯಾಂಕಿನ ಬಳಿ ಹಣ ಪಡೆದುಕೊಳ್ಳಲು ಆಗಮಿಸಿದ್ದ ಮಹಿಳೆ ಸಾಜಿದಾ ಅವರು ಫಸ್ಟ್ ಸುದ್ದಿಯೊಂದಿಗೆ ಮಾತನಾಡುತ್ತ, ಬಿಳಗುಳ ಶಾಖೆಯ ಬ್ಯಾಂಕಿಂಗ್ ಸೇವೆ ತೀರಾ ಕಳಪೆ ಮಟ್ಟದಿಂದ ಕೂಡಿದ್ದು, ಸಕಾಲದಲ್ಲಿ ಸೇವೆಗಳು ಲಭ್ಯವಾಗುತ್ತಿಲ್ಲ. ಮೂಡಿಗೆರೆ ಪಟ್ಟಣದಲ್ಲಿ ಇರುವ ವಿಜಯಾಬ್ಯಾಂಕ್ ನಲ್ಲಿ ನನ್ನ ಖಾತೆ ಇತ್ತು. ಬಿಳಗುಳದಲ್ಲಿ ಶಾಖೆ ಪ್ರಾರಂಭವಾದ ನಂತರ ಹಿಂದಿನ ಬ್ಯಾಂಕ್ ಮ್ಯಾನೇಜರ್ ಮನವಿ ಮಾಡಿದ್ದರಿಂದ ಬಿಳಗುಳ ಶಾಖೆಗೆ ನನ್ನ ಖಾತೆಯನ್ನು ವರ್ಗಾಯಿಸಿಕೊಂಡೆ. ಸ್ವಲ್ಪ ದಿನಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಬ್ಯಾಂಕಿನಲ್ಲಿ ವ್ಯವಹರಿಸುವುದು ಕಷ್ಟಕರವಾಗುತ್ತಿದೆ. ಕಾರಣ ಕೇಳಿದರೆ ಬ್ಯಾಂಕ್ ವಿಲೀನ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳುತ್ತಾರೆ. ಅಲ್ಲದೆ ಬಹುತೇಕ ಬಾರಿ ಬ್ಯಾಂಕಿನ ಎ.ಟಿ.ಎಂ ನಲ್ಲಿ ಹಣ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮತ್ತೋರ್ವ ಕುಮಾರ್ ಎಂಬುವವರು ಮಾತನಾಡುತ್ತಾ, ನನ್ನ ಮಾತೃಭಾಷೆ ಕನ್ನಡ. ಮಾತೃ ಭಾಷೆ ಹೊರತುಪಡಿಸಿ ಬೇರೆ ಭಾಷೆಗಳು ನನಗೆ ಅರ್ಥವಾಗುವುದಿಲ್ಲ. ಇಲ್ಲಿನ ಸಿಬ್ಬಂದಿಗಳಲ್ಲಿ ಬಹುತೇಕರಿಗೆ ಕನ್ನಡವೇ ಬರುವುದಿಲ್ಲ. ಮನೆಯ ಬಳಿ ಇರುವ ಬ್ಯಾಂಕಿನಲ್ಲಿ ಖಾತೆ ತೆರೆದರೆ ಎಲ್ಲದಕ್ಕೂ ಅನುಕೂಲ ಎಂದು ಬಿಳಗುಳ ವಿಜಯಾ ಬ್ಯಾಂಕಿನಲ್ಲಿ ಖಾತೆ ತೆರೆದು ವ್ಯವಹಾರ ಮಾಡುತ್ತಿದ್ದೇನೆ. ಭಾಷೆಯ ಸಮಸ್ಯೆಯಿಂದಾಗಿ ಬ್ಯಾಂಕಿನಲ್ಲಿ ವ್ಯವಹರಿಸಲು ಕಷ್ಟವಾಗುತ್ತಿದೆ. ಮನೆ ನವೀಕರಣಗೊಳಿಸಲು ಸಾಲದ ಅವಶ್ಯಕತೆ ಇತ್ತು. ಭಾಷೆಯ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಅಲ್ಲದೆ ಶಾಖೆಯ ವ್ಯವಸ್ಥಾಪಕರಿಗೆ ಕನ್ನಡ ಗೊತ್ತಿಲ್ಲದೆ ಇರುವುದರಿಂದ ಸ್ಥಳೀಯ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಸಿಕೊಂಡಿರುವ ಸ್ಥಳೀಯ ಯುವಕನೊಬ್ಬನ ಮೇಲೆ ಸಂಪೂರ್ಣವಾಗಿ ಆಧಾರವಾಗಿದ್ದಾರೆ. ಆದರೆ ಆ ಯುವಕ ನಾವು ಹೇಳಿದ್ದನ್ನು ಬಿಟ್ಟು ಬೇರೆಯದನ್ನೇ ವ್ಯವಸ್ಥಾಪಕರಿಗೆ ತಿಳಿಸಿದ ಫಲವಾಗಿ ಸಾಲದ ಮಂಜೂರಾತಿ ದೊರೆಯಲಿಲ್ಲ ಎಂದು ನೋವು ತೋಡಿಕೊಂಡರು. ಉನ್ನತ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಸೂಕ್ತ ಎನ್ನುವುದು ಎಲ್ಲರ ಆಶಯವಾಗಿದೆ.