ಮೂಡಿಗೆರೆ : ಭಾರಿ ಮಳೆಯಿಂದ ಪ್ರವಾಸೋದ್ಯಮ ಇಲಾಖೆ ಹೋಟೆಲ್ ಮೇಲ್ಚಾವಣಿ ಹಾನಿ-ಲಕ್ಷಾಂತರ ರೂ ನಷ್ಟ…

190
firstsuddi

ಮೂಡಿಗೆರೆ : ತಾಲ್ಲೂಕಿನ ಸುತ್ತಮುತ್ತಾ ಧಾರಾಕಾರ ಮಳೆಯಾಗುತ್ತಿದ್ದು, ಕೊಟ್ಟಿಗೆಹಾರ ಏಕಲವ್ಯ ವಸತಿ ಶಾಲೆಯ ಸಮೀಪದ ಪ್ರವಾಸೋದ್ಯಮ ಇಲಾಖೆಯ ನಿಸರ್ಗ ಗ್ರ್ಯಾಂಡ್ ಹೋಟೆಲ್‍ನ ಮೇಲ್ಚಾವಣಿ ಹಾನಿಯಾಗಿದೆ.
ಕಳೆದ ವರ್ಷ ಆರಂಭವಾಗಿದ್ದ ಹೋಟೆಲ್ ಕಳೆದ ಕೆಲ ತಿಂಗಳುಗಳಿಂದ ಕೊರೋನಾ ಲಾಕ್‍ಡೌನ್‍ನಿಂದ ಬಾಗಿಲು ಹಾಕಿತ್ತು. ಕೆಲ ದಿನಗಳ ಹಿಂದೆಯಷ್ಟೆ ಹೋಟೆಲ್ ಪುನರಾರಂಭಗೊಂಡಿದ್ದು ಬಾರಿ ಮಳೆಯಿಂದಾಗಿ ಹೋಟೆಲ್ ಮೇಲ್ಚಾವಣಿ ಹಾನಿಯಾಗಿ ಹೋಟೆಲ್‍ನ ನಾಮಫಲಕ ನೆಲಕಂಡಿದೆ.
ಹೋಟೆಲ್‍ನ ಮೇಲ್ಚಾವಣಿಗೆ ಹೆಂಚುಗಳನ್ನು ಹಾಕಲಾಗಿದ್ದು ಈ ಭಾಗದಲ್ಲಿ ಗಾಳಿಮಳೆ ಹೆಚ್ಚಾಗಿರುವುದರಿಂದ ಹೆಂಚಿನ ಮೇಲ್ಚಾವಣಿ ಇಲ್ಲಿನ ಮಳೆಗೆ ಉಳಿಯುವುದು ಕಷ್ಟಕರ. ಆರ್‍ಸಿಸಿ ಅಥವಾ ಶೀಟ್‍ಗಳನ್ನು ಮೇಲ್ಚಾವಣಿಗೆ ಅಳವಡಿಸಿದರೆ ಮಳೆಗಾಳಿಯಿಂದ ಕಟ್ಟಡವನ್ನು ರಕ್ಷಿಸುತ್ತದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಿಸರ್ಗ ಗ್ರ್ಯಾಂಡ್ ಹೋಟೆಲ್ ಮಾಲೀಕ ಸತೀಶ್ ಮರ್ಕಲ್, ಕೊರೊನಾ ಲಾಕ್‍ಡೌನ್‍ನಿಂದ ತಿಂಗಳುಗಟ್ಟಲೇ ಹೋಟೆಲ್ ತೆರಯಲಾಗಿಲ್ಲ. ಈಗ ಹೊಟೆಲ್ ತೆರೆದರೂ ಮಳೆಯಿಂದಾಗಿ ಹೋಟೆಲ್ ಮೇಲ್ಚಾವಣಿಗೆ ಹಾನಿಯಾಗಿದೆ. ಹೋಟೆಲ್ ಬಾಗಿಲು ಹಾಕಿದರೂ ಕೂಡ ಬಾಡಿಗೆಯನ್ನು ನೀಡಲೇಬೇಕು. ಮೇಲ್ಚಾವಣಿ ಹಾನಿಯಾಗಿರುವುದರಿಂದ ಲಕ್ಷಾಂತರ ರೂ ನಷ್ಟವಾಗಿದ್ದು ಸರ್ಕಾರ ಮೇಲ್ಚಾವಣಿ ದುರಸ್ಥಿಗೆ ಮುಂದಾದರೆ ಅನುಕೂಲವಾಗುತ್ತದೆ ಎಂದರು.