ಮೂಡಿಗೆರೆ : ಸಾರ್ವಜನಿಕರೊಂದಿಗೆ ಗೋಣಿಬೀಡು ಠಾಣಾಧಿಕಾರಿ ಅನುಚಿತ ವರ್ತನೆ- ಅವರ ವಿರುದ್ಧ ಕೂಡಲೇ ಕ್ರಮ ಜರುಗಿಸುವಂತೆ ಗ್ರಾಮಸ್ಥರಿಂದ ಪ್ರತಿಭಟನೆ…

3032
firstsuddi

ಮೂಡಿಗೆರೆ : ತಾಲ್ಲೂಕಿನ ಗೋಣಿಬೀಡು ಪೋಲೀಸ್ ಸಬ್ ಇನ್ಸ್‍ಪೆಕ್ಟರ್ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದು, ಅವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಗೋಣೀಬೀಡು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಯಿತು.
ಕಪ್ಪು ಪಟ್ಟಿ ಧರಿಸಿ ಜನ್ನಾಪುರ ವೃತ್ತದಿಂದ ಗೋಣಿಬೀಡು ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಗೋಣಿಬೀಡು ವೃತ್ತದಲ್ಲಿ ಜಮಾವಣೆಗೊಂಡರು. ನಂತರ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಸಾಲುಮರ ಮಹೇಶ್ ಅವರು ಮಾತನಾಡಿ, ಗೋಣಿಬೀಡು ಠಾಣಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಅರ್ಜುನ್ ಓರಕೆರೆ ಅವರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಬದಲು ದಬ್ಬಾಳಿಕೆ ನಡೆಸುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ಕದ್ದುನಿಂತು ಏಕಾಏಕಿ ವಾಹನ ಸವಾರರನ್ನು ಅಡ್ಡಗಟ್ಟಿ ವಿಚಾರಣೆ ನಡೆಸುತ್ತಾರೆ. ತಪಾಸಣೆ ವೇಳೆ ಹಳೆಯ ಹೆಲ್ಮೆಟ್ ಇದ್ದಲ್ಲಿ ಮಾಲೀಕರ ಎದುರಿನಲ್ಲಿಯೇ ನೆಲಕ್ಕೆ ಬಡಿದು ಪುಡಿಪುಡಿ ಮಾಡಿ ಹಿಂಸೆ ನೀಡುತ್ತಿದ್ದಾರೆ. ಸವಾರರ ಕೈನಲ್ಲಿ ಇದ್ದ ಮೊಬೈಲ್‍ನ್ನು ಕಿತ್ತುಕೊಂಡು ಸ್ಟೇಷನ್‍ಗೆ ಬಂದು ಮಾತನಾಡು ಎಂದು ಏಕವಚನದಿಂದ ಮಾತನಾಡುತ್ತಾರೆ. ಮಹಿಳೆಯರು ಮಕ್ಕಳು ಎನ್ನದೆ ಅವಾಚ್ಯ ಶಬ್ದದ ಬಳಕೆ ಮಾಡುತ್ತಿದ್ದು ಸಾರ್ವಜನಿಕರ ಅಭಿಪ್ರಾಯಗಳಿಗೆ ಬೆಲೆ ನೀಡುತ್ತಿಲ್ಲ.
ಅನುಚಿತ ವರ್ತನೆ ವಿರೋಧಿಸಿ ಮಾತನಾಡಿದ ಕೆಲವರ ಬಳಿ ರಿವಾಲ್ವರ್ ತೋರಿಸಿ ಶೂಟ್ ಮಾಡುವುದಾಗಿ ಮಾತನಾಡುವ ಠಾಣಾಧಿಕಾರಿ ಸರ್ವಾಧಿಕಾರಿಯ ಧೋರಣೆ ತೋರಿಸುತ್ತಿದ್ದಾರೆ. ಮಾರ್ಚ್ 19ರಂದು ಕನ್ನೆಹಳ್ಳಿ ಗ್ರಾಮಕ್ಕೆ ಬಂದು ಹೊಟ್ಟೆಪಾಡಿಗೆ ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ದೇವಸ್ಥಾನದ ಅರ್ಚಕರೊಬ್ಬರ ಮೇಲೆ ಅಕ್ರಮಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದಾಗ ವಿಚಾರಿಸಲು ಹೋದ ಗ್ರಾಮಪಂಚಾಯತಿಯ ಮಾಜಿ ಅಧ್ಯಕ್ಷರೊಬ್ಬರ ಮೇಲೆ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿರುತ್ತಾರೆ. ಕಾನೂನನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವ ಇಂಥಹ ಅಮಾನವೀಯ ಮನೋಭಾವದ ಠಾಣಾಧಿಕಾರಿ ನಮ್ಮ ಊರಿಗೆ ಬೇಡ. ಇವರ ವರ್ತನೆ ವಿರುದ್ಧ ಕಾನೂನು ಕ್ರಮ ಜರುಗಿಸುವುದರೊಂದಿಗೆ ಕೂಡಲೇ ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕನ್ನೆಹಳ್ಳಿ ಭರತ್ ಅವರು ಮಾತನಾಡಿ, ನಮ್ಮ ಸಂಬಂಧಿಗಳು ಪೋಲಿಸ್ ಇಲಾಖೆಯಲ್ಲಿ ಕಾರ್ಯಹಿಸುತ್ತಿದ್ದಾರೆ. ಪೋಲಿಸ್ ಇಲಾಖೆಯ ಕಷ್ಟದ ಕೆಲಸದ ಅರಿವು ನಮಗೆ ಇದೆ. ಗೋಣಿಬೀಡಿಗೆ ವರ್ಗವಾಗಿ ಬಂದಾಗ ಯಾವುದೋ ಒತ್ತಡದಲ್ಲಿ ಹೀಗೆ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದೆವು. ಆದರೆ ದಿನೇದಿನೇ ಠಾಣಾಧಿಕಾರಿ ಅವರ ಸರ್ವಾಧಿಕಾರ ಧೋರಣೆ ಹೆಚ್ಚಳವಾಗುತ್ತಿದ್ದು ಜನರಿಗೆ ಸಹಿಸಲು ಕಷ್ಟವಾಗುತ್ತಿದೆ. ನಮ್ಮ ಊರಿನಲ್ಲಿ ನಮ್ಮವರನ್ನೇ ಅಪರಾಧಿಗಳಂತೆ ನಡೆಸಿಕೊಳ್ಳುತ್ತಿರುವುದು ಎಲ್ಲರ ಮನಸ್ಸಿಗೆ ನೋವಾಗುತ್ತಿದೆ. ಸಾರ್ವಜನಿಕರ ಸೇವೆ ಮಾಡಲು ನಿಯೋಜಿತವಾಗಿರುವ ಒಬ್ಬ ಅಧಿಕಾರಿ ಸಾರ್ವಜನಿಕರಿಗೆ ಪೀಡಕನಾಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎನ್ನುವ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಪ್ರತಿಭಟನೆ ಕೈಗೊಂಡಿದ್ದೇವೆ. ಠಾಣಾಧಿಕಾರಿಕೆ ಕಾನೂನಿನ ಪ್ರಕಾರ ಕ್ರಮ ಜರುಗಿಸುವ ಜೊತೆಗೆ ಕೂಡಲೇ ವರ್ಗಾವಣೆ ಮಾಡದಿದ್ದಲ್ಲಿ ಉಗ್ರ ಹೋರಾಟಕ್ಕೆ ಸಿದ್ದರಿದ್ದೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆ ಬಳಿಕ ಠಾಣಾಧಿಕಾರಿ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬರೆದ ಪತ್ರವನ್ನು ಮೂಡಿಗೆರೆ ವೃತ್ತನಿರೀಕ್ಷಕರಿಗೆ ನೀಡಲಾಯಿತು. ಪ್ರತಿಭಟನೆಯಲ್ಲಿ ಗುತ್ತಿ ಧರ್ಮಪಾಲ್, ನಿಡಗೋಡು ಸುನೀಲ್, ಅರುಣ್ ಕುಂಬರಡಿ, ಗೋಣಿಬೀಡು ಶಿವಣ್ಣ, ಜೇನುಬೈಲ್ ತಾರೇಶ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಜರಿದ್ದರು.