ಮೂಡಿಗೆರೆ : ಹಿರೇಬೈಲು ಇಡಕಣಿ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ – ರಂಗೇರಿದ ಚುನಾವಣಾ ಕಣ…

297
firstsuddi

ಮೂಡಿಗೆರೆ : ಹಿರೇಬೈಲಿನ ಇಡಕಣಿ ಕೃಷಿ ಮತ್ತು ಪತ್ತಿನ ಸಹಕಾರಿ ಸಂಘದ 12 ನಿರ್ದೇಶಕರ ಆಯ್ಕೆಗೆ ಜ.18ರಂದು ಚುನಾವಣೆ ನಡೆಯಲಿದ್ದು, ನಿರ್ದೇಶಕರ ಹುದ್ದೆ ಅಲಂಕರಿಸಲು 2 ಗುಂಪುಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದ್ದು, ರೋಚಕ ಹಣಾಹಣಿಗಾಗಿ ಎದುರು ನೋಡಲಾಗುತ್ತಿದೆ.
ಸುಮಾರು 3150ಕ್ಕೂ ಹೆಚ್ಚು ಸದಸ್ಯರ ಬಲಹೊಂದಿರುವ ಇಲ್ಲಿನ ಸಹಕಾರ ಸಂಘದಲ್ಲಿ ಕೇವಲ 300ಕ್ಕೂ ಹೆಚ್ಚು ಸದಸ್ಯರ ಹೆಸರು ಮಾತ್ರ ನೊಂದಾವಣಿಯಲ್ಲಿ ಇತ್ತು. ಸತತವಾಗಿ ಮೂರು ವಾರ್ಷಿಕ ಮಹಾಸಭೆಗೆ ಗೈರುಹಾಜರಾಗಿದ್ದ ಸದಸ್ಯರುಗಳ ಮತದಾನದ ಹಕ್ಕುಗಳನ್ನು ಮೊಟಕುಗೊಳಿಸಲಾಗಿತ್ತು. ಇದಕ್ಕೆ ತೀವ್ರ ಪ್ರತಿರೋಧ ಒಡ್ಡಿದ 200ಕ್ಕೂ ಹೆಚ್ಚು ಸದಸ್ಯರುಗಳು ನ್ಯಾಯಾಲಯದ ಮೆಟ್ಟಿಲೇರಿ ತಮ್ಮ ಮತದಾನದ ಹಕ್ಕನ್ನು ಅಧಿಕೃತವಾಗಿ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಾಲ ಪಡೆದವರ ಸದಸ್ಯರ ಸಂಖ್ಯಾ ಬಲ 600ರ ಗಡಿ ದಾಟಿದ್ದು, ಸಾಲ ಪಡೆಯದವರ ಸದಸ್ಯರ ಮತದಾರರ ಸಂಖ್ಯೆ 100ಕ್ಕೆ ನಿಂತಿದೆ.
ಗ್ರಾಮಗಳ ಮಟ್ಟದಲ್ಲಿ ನಡೆಯುವ ಇಂಥಹ ಚುನಾವಣೆಯಲ್ಲಿ ಸಹಕಾರಿ ಸಂಸ್ಥೆಗಳ ನಿರ್ದೇಶಕರುಗಳಾಗುವುದು ಆಕಾಂಕ್ಷಿಗಳಿಗೆ ಪ್ರತಿಷ್ಠೆಯ ವಿಚಾರವಾಗಿರುತ್ತದೆ. ಈ ನಿಟ್ಟಿನಲ್ಲಿ ರಾಜಕೀಯ ಥಳುಕು ಒಳಗೊಂಡಿರುತ್ತದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸಹಜವಾಗಿ ಒಬ್ಬೊಬ್ಬ ಅಭ್ಯರ್ಥಿಯೂ ಕೂಡ ಒಂದೊಂದು ಪಕ್ಷದ ಜೊತೆಗೆ ಗುರುತಿಸಿಕೊಂಡಿರುತ್ತಾನೆ. ಒಟ್ಟು 13 ಸ್ಥಾನಗಳಿದ್ದು ಅದರಲ್ಲಿ 11 ಸಾಲಗಾರರ ಕ್ಷೇತ್ರದಿಂದಲೂ, ಸಾಲಗಾರರಲ್ಲದ ಕ್ಷೇತ್ರದಿಂದಲೂ ಮತ್ತೊಂದು ಸಂಘದ ನಾಮ ನಿರ್ದೇಶಿತ ಸದಸ್ಯರನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಸಹಕಾರ ಸಂಘಗಳಲ್ಲಿ ಆಯಾ ಸಂಘದ ಷೇರುದಾರ ಸದಸ್ಯರುಗಳು ಚುನಾವಣೆಗಳ ಮೂಲಕ ಸಂಘದ ನಿರ್ದೇಶಕರುಗಳನ್ನು ಆಯ್ಕೆ ಮಾಡುತ್ತಾರೆ. ನಂತರ ಚುನಾವಣೆಯಲ್ಲಿ ಗೆಲುವು ಕಂಡ ನಿರ್ದೇಶಕರುಗಳು ಒಟ್ಟಾಗಿ ಸಂಘದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಇದೇ ಪ್ರಕಾರವಾಗಿ ಹಿರೇಬೈಲಿನ ಇಡಕಣಿ ಕೃಷಿ ಮತ್ತು ಪತ್ತಿನ ಸಹಕಾರಿ ಸಂಘದ ಚುನಾವಣೆಯೂ ಸಹ ನಡೆಯಲಿದ್ದು ಅಭ್ಯರ್ಥಿಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
5 ವರ್ಷಗಳಿಂದ ಸಂಘದಲ್ಲಿ ಹತೋಟಿ ಸಾಧಿಸಿದ್ದ ಬಿಜೆಪಿ ಮುಖಂಡ ಹೆಮ್ಮಕ್ಕಿ ಗಿರೀಶ್ ಅವರ ತಂಡ ಹಾಗೂ ಕಾಂಗ್ರೆಸ್ ಮುಖಂಡ ಮರಸಣಿಗೆ ವಿಶ್ವನಾಥ್ ನೇತೃತ್ವದ ತಂಡಗಳ ನಡುವೆ ನೇರವಾದ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ ಸಹಕಾರಿ ಸಂಘದಲ್ಲಿ ಅಧ್ಯಕ್ಷರಾಗಿದ್ದ ಎಂ.ಎಸ್ ಮುರಳೀಧರ್ ಹಾಗೂ ಕೆ.ಶಿವೇಗೌಡ ಅವರುಗಳು ಈ ಬಾರಿ ವಿರೋಧಿ ಪಾಳಯದ ಜೊತೆ ಗುರುತಿಸಿಕೊಂಡಿದ್ದು, ಕೆ.ಶಿವೇಗೌಡ ಅವರು ತಾನು ಬಿಜೆಪಿಯಲ್ಲಿಯೇ ಇದ್ದೇನೆ ಎಂದು ತಮ್ಮ ಪತ್ನಿ ಪಾರ್ವತಿ ಅವರನ್ನು ಕಣಕ್ಕೆ ಇಳಿಸಿರುವುದು ಬೆಜೆಪಿ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ಇತ್ತ ಕಾಂಗ್ರೆಸ್ ಪಾಳಯದ ವಿಶ್ವನಾಥ್ ಅವರ ತಂಡದ ಪರವಾಗಿ ಜಿಲ್ಲಾ ಪಂಚಾಯತಿ ಸದಸ್ಯ ಕೆ.ಆರ್.ಪ್ರಭಾಕರ್ ಮತ್ತು ತಾಲ್ಲೂಕು ಪಂಚಾಯತಿ ಸದಸ್ಯ ಹಿತ್ತಲಮಕ್ಕಿ ರಾಜೇಂದ್ರ ಅವರುಗಳು ಬ್ಯಾಟಿಂಗ್ ಶುರು ಮಾಡಿದ್ದು, ಬಿಜೆಪಿ ಪಾಳಯದ ಮುತ್ಸದ್ದಿಗಳು ತಮ್ಮದೇ ತಂತ್ರಗಾರಿಕೆಯ ಮೂಲಕ ಅಧಿಕಾರದ ಗದ್ದುಗೆ ಏರುವ ನಿಟ್ಟಿನಲ್ಲಿ ಪ್ರತ್ನ ಮಾಡುತ್ತಿದ್ದಾರೆ.
ಜೆಡಿಎಸ್ ಕಾರ್ಯಕರ್ತರಾದ ಮುರಳೀಧರ್ ಹಾಗೂ ಪ್ರದೀಪ್, ಬಿಜೆಪಿಯ ದಲಿತ ಮುಖಂಡ ಮರಿಯಯ್ಯ ಹಾಗೂ ಕಾಂಗ್ರೆಸ್ಸಿನ ಅನಿಲ್ ಭಂಡಾರಿ ಅವರಗಳು ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಗಳಾಗಿ ಸ್ಪರ್ಧೆಗೆ ಇಳಿದಿರುವುದು ಚುನಾವಣ ಕಣ ಇನ್ನಷ್ಟು ರಂಗೇರಲು ಕಾರಣವಾಗಿದೆ. ಒಟ್ಟಾರೆ ಸ್ಥಳೀಯವಾಗಿ ಪ್ರತಿಷ್ಠೆಯ ಪ್ರತಿಬಿಂಬ ಎಂದೇ ಭಾವಿಸಲಾಗಿರುವ ಇಡಕಣಿ ಕೃಷಿ ಮತ್ತು ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ಇನ್ನು ಕೆಲವೇ ದಿನಗಳು ಉಳಿದಿದ್ದು ಯಾವ ರೀತಿಯ ಬೆಳವಣಿಗೆಗಳು ನಡೆಯುತ್ತವೆ ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.