ಮೂಡಿಗೆರೆ:ಛತ್ರಮೈದಾನದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ.

261
ಮೂಡಿಗೆರೆ : ಪಟ್ಟಣದ ಛತ್ರಮೈದಾನದಲ್ಲಿ 11 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಅಂಗನವಾಡಿ ಕೇಂದ್ರವನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಉದ್ಘಾಟಿಸಿ ಮಾತನಾಡಿದರು.
    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಯುವ ಸಮುದಾಯವು ಆರೋಗ್ಯಯುತವಾಗಿ ಬೆಳೆಯುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಬಹಳ ಪ್ರಮುಖವಾದದ್ದು. ಅಪೌಷ್ಟಿಕತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಅಂಗನವಾಡಿ ಕೇಂದ್ರಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಿದ ಕಾರಣದಿಂದ ಅಪೌಷ್ಟಿಕತೆಯಿಂದ ಯುವ ಸಮುದಾಯವನ್ನು ಕಾಪಾಡಿ ದೇಶವನ್ನು ರಕ್ಷಿಸುವ ಕೆಲಸ ಅಂಗನವಾಡಿ ಕೇಂದ್ರಗಳು ಮಾಡಿವೆ. ಈ ಕಾರಣದಿಂದಲೇ ಇಂದಿಗೂ ಸಹ ಬಡ ಹಾಗೂ ಮಧ್ಯಮವರ್ಗಗಳ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳು ಸಹಕಾರಿಯಾಗಲೆಂದು ಸರ್ಕಾರ ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆಂದು ಭಾರೀ ಮೊತ್ತದಲ್ಲಿ ಹಣ ಬಿಡುಗಡೆ ಮಾಡುತ್ತಿದೆ ಎಂದರು.
     ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಗರ್ಭಿಣಿಯರಿಗೆ ಮಾತೃಪೂರ್ಣ ಯೋಜನೆಯ ಪೌಷ್ಟಿಕ ಆಹಾರ ನೀಡುವ ಕೆಲಸ ಮಾಡಲಾಗುತ್ತಿದೆ. 2 ವರ್ಷಗಳಿಂದ ಬೀಳುತ್ತಿರುವ ಭಾರಿ ಮಳೆಗೆ ಹಲವು ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆಗೆ ತಲುಪಿದ್ದು, ಅಂಗನವಾಡಿ ದುರಸ್ಥಿಗೆ 1ಕೋ.ರೂ ಹಾಗೂ ಶಾಲಾ ದುರಸ್ಥಿಗೆ 1.5 ಕೋ.ರೂ ಹಣ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಮುಂದಿನ ಶಾಲಾರಂಭದ ಒಳಗೆ ದುರಸ್ಥಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.
    ಪ.ಪಂ.ಅಧ್ಯಕ್ಷ ಅನುಕುಮಾರ್ ಅವರು ಮಾತನಾಡಿ, ಅಂಗನವಾಡಿ ಕೇಂದ್ರಗಳು ದುರಸ್ಥಿಯ ಹಂತದಲ್ಲಿ ಇದ್ದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರುವುದು ಸೂಕ್ತ. ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಹೆಚ್ಚಿನ ಹಣ ಬಿಡುಗಡೆ ಮಾಡುತ್ತಿದ್ದು ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂದರು.
      ಪ.ಪಂ.ಉಪಾಧ್ಯಕ್ಷ ಕೆ.ಕೆ.ಸುಧೀರ್, ಸದಸ್ಯರುಗಳಾದ ಗೀತಾ ರಂಜನ್ ಅಜಿತ್ ಕುಮಾರ್, ಕಮಲಮ್ಮ, ಧರ್ಮಪಾಲ್, ಮನೋಜ್, ಸಿ.ಡಿ.ಪಿ.ಓ ಇಂಪಾ, ಮೇಲ್ವಿಚಾರಕಿ ನೀಲಮ್, ಅಂಗನವಾಡಿ ಕಾರ್ಯಕರ್ತೆ ನವ್ಯಶ್ರೀ ಉಪಸ್ಥಿತರಿದ್ದರು.