ಮೂರೂ ಕ್ಷೇತ್ರಗಳ ಸೋಲಿನಿಂದ ನಮಗೆ ನಿರಾಸೆ ಆಗಿರೋದು ಸತ್ಯ: ಬಿ.ವೈ.ವಿಜಯೇಂದ್ರ.

35

ಬೆಂಗಳೂರು: ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಸೋಲನುಭವಿಸಿರುವುದಕ್ಕೆ ನಮಗೆ ನಿರಾಸೆ ಆಗಿರುವುದು ಸತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು. ಸೋಲಿನ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೂರೂ ಕ್ಷೇತ್ರಗಳಲ್ಲೂ ನಮಗೆ ಹಿನ್ನಡೆ ಆಗಿದೆ. ಶಿಗ್ಗಾಂವಿ, ಸಂಡೂರಿನಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇತ್ತು. ಆದರೆ, ನಿರಾಸೆ ಆಯ್ತು ಎಂದು ತಿಳಿಸಿದರು. ಮೂರೂ ಕ್ಷೇತ್ರಗಳ ಸೋಲಿನ ಬಗ್ಗೆ ಎರಡೂ ಪಕ್ಷಗಳ ನಾಯಕರು ಚರ್ಚೆ ಮಾಡ್ತೇವೆ. ನಮಗೆ ನಿರಾಸೆ ಆಗಿರೋದು ಸತ್ಯ. ಲೋಪಗಳೇನು ಆಯ್ತು ಅಂತ ಚರ್ಚೆ ಮಾಡ್ತೇವೆ ಎಂದರು. ಸಂಡೂರಿನಲ್ಲಿ ಇದೇ ಮೊದಲ ಬಾರಿ 80 ಸಾವಿರ ಮತ ಬಿಜೆಪಿಗೆ ಸಿಕ್ಕಿದೆ. 8-10 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಸಂಡೂರು ಫಲಿತಾಂಶ ಹಿನ್ನಡೆ ಅಂತ ನಾವು ಭಾವಿಸುವುದಿಲ್ಲ ಎಂದು ಹೇಳಿದರು. ಶಿಗ್ಗಾಂವಿ ಫಲಿತಾಂಶ ಆಘಾತ ತಂದಿದೆ. ಬೊಮ್ಮಾಯಿ ಸುಪುತ್ರ ಸ್ಪರ್ಧೆ ಮಾಡಿದ್ರು, ಎಲ್ರೂ ಶ್ರಮ ಹಾಕಿದ್ವಿ. ಸೋಲಿಗೆ ಕಾರಣ ಹುಡುಕ್ತೇವೆ ಎಂದರು. ಇದೇ ವೇಳೆ, ಮಹಾರಾಷ್ಟ್ರದಲ್ಲಿ ನಮ್ಮ ನಿರೀಕ್ಷೆ ಮೀರಿ 200 ಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಮತ್ತೊಮ್ಮೆ ಮೋದಿಯವರ ನಾಯಕತ್ವಕ್ಕೆ ವಿಶ್ವಾಸ ಇಟ್ಟಿದ್ದಾರೆ ಜನ ಎಂದು ಸಂತಸ ವ್ಯಕ್ತಪಡಿಸಿದರು.