ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ : 6 ಮಂದಿಯ ಬಂಧನ…

60
firstsuddi

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಗಳನ್ನು ಅಂಟಿಸಿದ ಆರೋಪದ ಮೇಲೆ ಪೊಲೀಸರು 100 ಎಫ್ಐಆರ್ ದಾಖಲಿಸಿದ್ದು, 6 ಜನರನ್ನು ಬಂಧಿಸಿದ್ದಾರೆ.

ಪೋಸ್ಟರ್ ಗಳಲ್ಲಿ ಪ್ರಿಂಟಿಂಗ್ ಪ್ರೆಸ್ ನ ವಿವರಗಳಿಲ್ಲ. 44,000ಕ್ಕೂ ಹೆಚ್ಚು ಪೋಸ್ಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಫ್ಐಆರ್ ನ್ನು ಪ್ರಿಂಟಿಂಗ್ ಪ್ರೆಸ್ ಆಕ್ಟ್ & ಡಿಫೇಸ್ಮೆಂಟ್ ಆಫ್ ಪ್ರಾಪರ್ಟಿ ಆಕ್ಟ್ ನಡಿ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ.

ಎಎಪಿ ಕಚೇರಿಯಿಂದ ಹೊರ ಬಂದ ವಾಹನವನ್ನು ತಡೆದು ಪರಿಶೀಲಿಸಲಾಗಿದೆ. ಅದರಲ್ಲಿಯೂ ಪ್ರಧಾನಿ ವಿರುದ್ಧದ ಪೋಸ್ಟರ್ ಗಳಿದ್ದವು. ಬಂಧಿತ ಆರು ಜನರಿಂದಲೂ ಪೋಸ್ಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಪೋಸ್ಟರ್ ಗಳನ್ನು ಯಾರು ಸೂಚನೆ ಮೇರೆಗೆ ಹಾಕಲಾಗಿದೆ. ಅವರ ಉದ್ದೇಶವೇನು ಎಂಬುದರ ಕುರಿತು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭಿತ್ತಿಪತ್ರಗಳ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷ, ಕೇವಲ ಪೋಸ್ಟರ್ ಗಳಿಗೆ ಮೋದಿ ಹೆದರೋದೇಕೆ? ಇದು ಸರ್ವಾಧಿಕಾರಿ ಧೋರಣೆಯಾಗಿದೆ. ಪ್ರಧಾನಿ ವಿರುದ್ಧ ಪೋಸ್ಟರ್ ಹಾಕಿದ ಕಾರಣಕ್ಕಾಗಿ 100 ಕೇಸ್ ದಾಖಲಿಸಿದ್ದು ಸರಿಯಲ್ಲ. ಪ್ರಧಾನಿಗಳೇ ನಿಮಗೆ ಬಹುಶಃ ತಿಳಿದಿರಲಿಕ್ಕಿಲ್ಲ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಒಂದು ಪೋಸ್ಟರ್ ಗೆ ಇಷ್ಟು ಹೆದರಿರೋದು ಏಕೆ ಎಂದು ಪ್ರಶ್ನಿಸಿದೆ.