ನವದೆಹಲಿ : ಗೋಧಿ ರಫ್ತುಗಳನ್ನು ನಿಷೇಧಿಸಲು ಭಾರತ ನಿರ್ಧರಿಸಿದ ಬಳಿಕ ವಿಶ್ವ ಮಾರುಕಟ್ಟೆಯಲ್ಲಿ ಗೋಧಿ ಬೆಲೆಗಳು ದಾಖಲೆಯ ಏರಿಕೆ ಕಂಡಿದೆ. ಯುರೋಪ್ ಮಾರುಕಟ್ಟೆಯಲ್ಲಿ ಪ್ರತಿ ಟನ್ ಗೆ 435 ಯುರೋಗಳಿಗೆ (35,311 ರೂ.) ಜಿಗಿದಿದೆ.
ರಷ್ಯಾ ಮತ್ತು ಉಕ್ರೇನ್ ಗೋಧಿ ರಫ್ತು ಮಾಡುವ ರಾಷ್ಟ್ರಗಳಲ್ಲಿ ಪ್ರಮುಖವಾಗಿದ್ದವು. ಆದರೆ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಗೋಧಿ ಬೆಲೆಯೂ ಏರಿಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಗೋಧಿಗೆ ಹೆಚ್ಚಿನ ಬೆಲೆ ಬಂದಿತ್ತು. ಆದರೆ ಭಾರತದಲ್ಲಿ ಉಷ್ಣತೆಯಲ್ಲಿ ಏರಿಕೆ ಕಂಡಿದ್ದರಿಂದ ಗೋಧಿ ಉತ್ಪಾದನೆಗೆ ಹೊಡೆತ ಬಿದ್ದಿತ್ತು. ಇದರ ಜೊತೆಗೆ ತನ್ನದೇ ಆದ 1.4 ಶತಕೋಟಿ ಜನರ ಆಹಾರ ಭದ್ರತೆಯ ಬಗ್ಗೆ ಭಾರತ ಚಿಂತಿಸಿತ್ತು. ಇದರಿಂದಾಗಿ ರಫ್ತು ವ್ಯಾಪಾರಕ್ಕೆ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿತ್ತು.
ಭಾರತದ ಈ ನಿರ್ಧಾರವನ್ನು ಯುಎಸ್, ಕೆನಡಾ, ಇಯು ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಟೀಕಿಸಿವೆ. ಆದಾಗ್ಯೂ, ಜಿ7 ಟೀಕೆಗಳ ನಂತರ ಚೀನಾ ಭಾರತದ ರಕ್ಷಣೆಗೆ ಬಂದಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ದೂಷಿಸುವುದು ಜಾಗತಿಕ ಆಹಾರ ಬಿಕ್ಕಟ್ಟನ್ನು ಪರಿಹರಿಸುವುದಿಲ್ಲ ಎಂದು ಹೇಳಿದೆ.










