ಕೀವ್ : ರಷ್ಯಾ, ಉಕ್ರೇನ್ ವಿರುದ್ಧ ಯುದ್ಧ ಸಾರಿ ಐದು ದಿನಗಳು ಕಳೆದಿದೆ. ಇದರ ಮಧ್ಯೆ ಇಂದು ಬೆಲಾರಸ್ ನ ಗಡಿ ಪ್ರದೇಶದಲ್ಲಿ ರಷ್ಯಾ- ಉಕ್ರೇನ್ ನಿಯೋಗದ ಮಧ್ಯೆ ಮಹತ್ವದ ಶಾಂತಿ ಮಾತುಕತೆ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಕದನ ವಿರಾಮ ಘೋಷಣೆ ಮಾಡುವಂತೆ ಉಕ್ರೇನ್ ಷರತ್ತು ವಿಧಿಸಿದೆ.
ತಕ್ಷಣ ರಷ್ಯಾ ಸೇನಾಪಡೆ ಕದನ ವಿರಾಮ ಘೋಷಿಸಿ ಉಕ್ರೇನ್ ನಿಂದ ಹೊರನಡೆಯಬೇಕೆಂದು ಪಟ್ಟು ಹಿಡಿದಿದೆ. ಅಲ್ಲದೆ ಈಗಾಗಲೇ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದು, ಇನ್ನಾದರೂ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಸಹಕರಿಸಿ ಎಂದು ಮನವಿ ಮಾಡಿಕೊಂಡಿದೆ.
ಸಂಧಾನ ಸಭೆಯಲ್ಲಿ ಉಭಯ ದೇಶಗಳ ಪ್ರಮುಖರು ಸೇರಿದ್ದಾರೆ. ಯುದ್ಧ ಆರಂಭದ ಬಳಿಕ ನಡೆಯುತ್ತಿರುವ ಎರಡನೇ ಸುತ್ತಿನ ಮಾತುಕತೆ ಇದಾಗಿದ್ದು, ನಿನ್ನೆ ಕೂಡ ಗೋಮೆಲ್ ಪ್ರದೇಶದಲ್ಲಿ ಉಭಯ ದೇಶಗಳ ಮಧ್ಯೆ ಶಾಂತಿ ಮಾತುಕತೆ ನಡೆದಿತ್ತು.










