ಬೆಂಗಳೂರು : ನಾಳೆಯಿಂದ ಆರನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಯಾವ ಪ್ರತಿಭಟನೆಯೂ ಮಾಡುವಂತಿಲ್ಲ. ಏ.21 ರವರೆಗೆ ಕೋವಿಡ್ ಪ್ರೋಟೋಕಾಲ್ ಜಾರಿಯಲ್ಲಿದೆ. ಒಂದು ವೇಳೆ ಪ್ರತಿಭಟನೆ ಮಾಡಿದರೂ ಮುಲಾಜಿಲ್ಲದೇ ಬಂಧಿಸಲಾಗುತ್ತದೆ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಈಗಾಗಲೇ ನಗರದಲ್ಲಿ ಎಲ್ಲಾ ಬಂದೋಬಸ್ತ್ ಗೆ ಸಿದ್ಧತೆ ಕೈಗೊಂಡಿದ್ದೇವೆ. ಕರ್ತವ್ಯಕ್ಕೆ ಹಾಜರಾಗುವವರಿಗೆ ಆರ್ಮ್ ಎಸ್ಕಾರ್ಟ್ನಲ್ಲಿ ಭದ್ರತೆ ಕೊಡ್ತೀವಿ. ಕೆಲಸಕ್ಕೆ ಬರೋದು ಬಿಡೋದು ಅವರಿಗೆ ಬಿಟ್ಟಿದ್ದು, ಆದರೆ, ರಸ್ತೆಗಿಳಿದು ಕಲ್ಲು ತೂರಾಟ, ರಸ್ತೆ ತಡೆ ಮಾಡಿದರೆ ಅಂತವರಿಗೆÀ ತಕ್ಕ ಶಾಸ್ತಿ ಮಾಡುತ್ತೇವೆ, ಯಾರಾದ್ರೂ ಚೇಷ್ಟೆ ಮಾಡಿದ್ರೆ ಅವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆದಿದೆ. ನಾಳೆ ಬಸ್ ಇಲ್ಲದಿದ್ದರೂ ಖಾಸಗಿಯವರು ಸಹಕಾರ ನೀಡಿದರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳುತ್ತೇವೆ ಎಂದು ಭರವಸೆ ನೀಡಿದ್ದಾರೆ.










