ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಬೆಂಗಳೂರು, ಶಿವಮೊಗ್ಗ, ಹುಬ್ಬಳಿಯಲ್ಲಿ ಎನ್ಐಎ ದಾಳಿ…

34
firstsuddi

ಬೆಂಗಳೂರು/ಶಿವಮೊಗ್ಗ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದ ವ್ಯಕ್ತಿಗಳ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಬೆಂಗಳೂರು, ಶಿವಮೊಗ್ಗ, ಹುಬ್ಬಳಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರದಲ್ಲಿ ಕಡೆ ದಾಳಿ ನಡೆದಿದೆ. ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ದಾಳಿ ನಡೆಸಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನೂ ಶಿವಮೊಗ್ಗದ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿಯಲ್ಲಿ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳ ತಂಡವು ಹಳೆ ಆರೋಪಿ ಅಬ್ದುಲ್ ಮತೀನ್, ಬಾಂಬರ್ ಮುಸಾವೀರ್ ಹುಸೇನ್, ಬಾಂಬರ್‌ಗೆ ಸಹಾಯ ಮಾಡಿದ ಸಾರ್ಧಾರ್ ನವೀದ್, ಈ ಮೂವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಾಂಬರ್ ಮುಸಾವೀರ್ ಹುಸೇನ್ ಚೆನ್ನೈನಿಂದ ಬಂದಾಗ, ಮತೀನ್, ನವೀದ್ ಸಹಾಯ ಮಾಡಿದ್ದರು ಎಂದು ಹೇಳಲಾಗಿದೆ. ಸದ್ಯ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಮಾಹಿತಿ ಕಲೆಹಾಕುತ್ತಿದ್ದಾರೆ.