ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಇತ್ತ ದೆಹಲಿ ಹಾಗೂ ಪಂಜಾಬ್ ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ವಿಪಕ್ಷಗಳ ಬೆಂಬಲಿತ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ಬೆಂಬಲ ಘೋಷಣೆ ಮಾಡಿದೆ.
ನಾವು ದ್ರೌಪದಿ ಮುರ್ಮು ಅವರನ್ನು ಗೌರವಿಸುತ್ತೇವೆ. ಆದರೆ ನಮ್ಮ ಬೆಂಬಲ ಯಶವಂತ್ ಸಿನ್ಹಾ ಅವರ ಪರವಾಗಿದೆ ಎಂದು ಆಪ್ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.
ದೆಹಲಿ ಮತ್ತು ಪಂಜಾಬ್ ಎರಡು ರಾಜ್ಯಗಳಲ್ಲಿ ಸರ್ಕಾರಗಳನ್ನು ಹೊಂದಿರುವ ಏಕೈಕ ಬಿಜೆಪಿಯೇತರ, ಕಾಂಗ್ರೆಸ್ಸೇತರ ಪಕ್ಷ ಎಎಪಿ. ಆಮ್ ಆದ್ಮಿ ಪಕ್ಷ ಒಟ್ಟು 10 ರಾಜ್ಯಸಭಾ ಸದಸ್ಯರನ್ನ ಹೊಂದಿದ್ದು, ಪಂಜಾಬ್ ನಲ್ಲಿ 92, ದೆಹಲಿಯಲ್ಲಿ 62 ಮತ್ತು ಗೋವಾದಲ್ಲಿ ಇಬ್ಬರು ಸೇರಿದಂತೆ ಒಟ್ಟು 156 ಶಾಸಕರನ್ನು ಹೊಂದಿದೆ.
ರಾಷ್ಟ್ರಪತಿ ಚುನಾವಣೆಗೆ ಜುಲೈ 18ರಂದು ಮತದಾನ ನಡೆಯಲಿದ್ದು, ಜುಲೈ 21ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.










