ನವದೆಹಲಿ : ಕಾರು ಅಪಘಾತದಲ್ಲಿ ಕ್ರಿಕೆಟಿಗ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪಂತ್ ಗೆ ಅಪಘಾತವಾಗಿರುವ ಸುದ್ದಿ ಕೇಳಿ ದುಃಖವಾಗಿದೆ. ಆದಷ್ಟು ಬೇಗ ಆರೋಗ್ಯ ಸುಧಾರಿಸಲಿ, ಚೇತರಿಕೆ ಕಾಣಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಿನ್ನೆಯಷ್ಟೇ ಟ್ವೀಟ್ ಮಾಡಿದ್ದರು. ಇದೀಗ ಪಂತ್ ಅವರ ತಾಯಿಯೊಂದಿಗೆ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ.
ಪಂತ್ ಅವರ ತಾಯಿಗೆ ಕರೆ ಮಾಡಿ, ರಿಷಭ್ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ರಿಷಭ್ ಅವರು ಶೀಘ್ರವೇ ಗುಣಮುಖರಾಗಿ ಬರಲಿದ್ದಾರೆ. ಅದಕ್ಕೆ ಅಗತ್ಯ ರೀತಿಯ ಎಲ್ಲ ಸಹಕಾರಗಳನ್ನು ನೀಡಲಾಗುವುದು ಎಂದು ಅಭಯ ನೀಡಿದ್ದಾರೆ.
ರಿಷಭ್ ಪಂತ್ ನಿನ್ನೆ ಮುಂಜಾನೆ ತಮ್ಮ ಮರ್ಸಿಡಿಸ್ ಕಾರಿನಲ್ಲಿ ದೆಹಲಿಯಿಂದ ಮನೆಗೆ ವಾಪಸಾಗುತ್ತಿದ್ದಾಗ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಸದ್ಯ ಪಂತ್ ಡೆಹ್ರಾಡೂನ್ ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡೆಹ್ರಾಡೂನ್ ನ ಆಸ್ಪತ್ರೆಯ ವೈದ್ಯರು ಮೊಣಕಾಲಿನ ಅಸ್ಥಿರಜ್ಜು ಗಾಯದ ಬಗ್ಗೆ ಶಂಕಿಸಿದ್ದಾರೆ. ಬಿಸಿಸಿಐ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ರಿಷಭ್ ಅವರ ಹಣೆಯ ಮೇಲೆ ಗಾಯಗಳು, ಬಲ ಮೊಣಕಾಲು ಮುರಿದಿದೆ. ಬಲ ಮಣಿಕಟ್ಟು, ಪಾದ ಮತ್ತು ಬೆನ್ನಿಗೆ ಗಾಯಗಳಾಗಿವೆ ಎಂದಿದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ತಂಡವು ಪಂತ್ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮ್ಯಾಕ್ಸ್ ಆಸ್ಪತ್ರೆಗೆ ಹೋಗಿದೆ. ಅಗತ್ಯವಿದ್ದರೆ ಅವರನ್ನು ದೆಹಲಿಗೆ ಪ್ಲಾಸ್ಟಿಕ್ ಸರ್ಜರಿಗಾಗಿ ವಿಮಾನದಲ್ಲಿ ಕರೆದೊಯ್ಯುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ.










