ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್ ಗಂಭೀರ ಆರೋಪ…

65
firstsuddi

ಮೈಸೂರು : ನಿರ್ಗಮಿತ ನಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಾ.ರಾ.ಮಹೇಶ್ ಅವರು, ಮೈಸೂರಿನ ಹಿಂದಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಬಟ್ಟೆ ಬ್ಯಾಗ್ ಖರೀದಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ದಾಖಲೆಗಳನ್ನು ಕೂಡ ಬಿಡುಗಡೆ ಮಾಡಿದರು.

ಬಟ್ಟೆ ಬ್ಯಾಗ್ ಖರೀದಿಗೆ ಜಿಎಸ್‌ ಟಿ ಸೇರಿ 9 ರೂ ಆಗುತ್ತದೆ. ಆದರೆ, ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕೈಮಗ್ಗ ಇಲಾಖೆಯವರಿಂದ ಖರೀದಿಸದೆ, ಖಾಸಗಿಯವರಿಂದ ಬ್ಯಾಗ್ ಖರೀದಿಸಿದ್ದಾರೆ. ಒಂದು ಬ್ಯಾಗ್ ಖರೀದಿಗೆ 52 ರೂ. ನಿಗದಿ ಮಾಡಿದ್ದಾರೆ. ಬ್ಯಾಗ್ ಮೇಲೆ ಕೇವಲ “ನಾನು ಪರಿಸರ ಸ್ನೇಹಿ” ಎಂಬ ಸಾಲು ಹಾಗೂ ಚಿಹ್ನೆ ಮುದ್ರಣ ಮಾಡಿಸಲು, ಪ್ರತಿ ಚೀಲಕ್ಕೆ 42 ರೂ. ಬಿಲ್ ಮಾಡಿದ್ದಾರೆ. ಒಟ್ಟು 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಇದಕ್ಕೆ ವಾಸ್ತವವಾಗಿ ತಗುಲುವುದು 1,47,15,000 ರೂಪಾಯಿ. 6 ಕೋಟಿ 18 ಲಕ್ಷ ರೂ. ಭ್ರಷ್ಟಾಚಾರ ನಡೆದಿದೆ. ರೋಹಿಣಿ ಸಿಂಧೂರಿ 6 ಕೋಟಿ ರೂ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಸಾ.ರಾ.ಮಹೇಶ್ ಆರೋಪಿಸಿದರು.

ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸುತ್ತೇನೆ. ಜೊತೆಗೆ ಈ ಅವ್ಯವಹಾರದ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಖ್ಯ ಕಾರ್ಯದರ್ಶಿ ಕಚೇರಿಯ ಎದುರು ಉಪವಾಸ ಕೈಗೊಳ್ಳಲಾಗುವುದು ಎಂದು ಸಾ. ರಾ. ಮಹೇಶ್ ಘೋಷಿಸಿದರು.