ಪರಿಸರವಾದಿ ಡಿ.ವಿ. ಗಿರೀಶ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ : ಏಳು ಮಂದಿ ಬಂಧನ…

106
firstsuddi

ಚಿಕ್ಕಮಗಳೂರು : ಪರಿಸರವಾದಿ ಡಿ.ವಿ. ಗಿರೀಶ್ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಜನರನ್ನು ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 30 ರಂದು ಚಿಕ್ಕಮಗಳೂರು ತಾಲೂಕಿನ ಕಂಬಿಹಳ್ಳಿ ಗ್ರಾಮದಲ್ಲಿ ಡಿ.ವಿ. ಗಿರೀಶ್ ಅವರ ಜೊತೆ ಇದ್ದ ಅವರ ಸ್ನೇಹಿತನ ಮಗಳನ್ನು ಕಿಡಿಗೇಡಿಗಳು ಚುಡಾಯಿಸಿದ್ದರು. ಈ ವೇಳೆ ಗಿರೀಶ್ ಅವರು ಕಿಡಿಗೇಡಿಗಳನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಕಿಡಿಗೇಡಿಗಳು ಗಿರೀಶ್ ಹಾಗೂ ಅವರ ತಂಡದ ಮೇಲೆ ಹಲ್ಲೆ ನಡೆಸಿದ್ದರು. ಗಿರೀಶ್ ಅವರ ಮೇಲೆ ಹಲ್ಲೆ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ಮಾತನಾಡಿರುವ ಜಿಲ್ಲಾ ಎಸ್ಪಿ ಅಕ್ಷಯ್, ಗಿರೀಶ್ ಅವರ ಮೇಲೆ ಕಿಡಿಗೇಡಿಗಳು ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಂಡ ನಾವು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ತಂಡಗಳನ್ನು ರಚನೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದೇವೆ. ಬಂಧಿತ ಆರೋಪಿಗಳು ಸಂತವೇರಿ, ಕಂಬಿ ಹಳ್ಳಿ, ಹಾಗೂ ಹೊಸಪೇಟೆ ನಿವಾಸಿಗಳಾಗಿದ್ದಾರೆ. ಕೇವಲ 48 ಗಂಟೆಗಳಲ್ಲಿ ಏಳು ಜನ ಆರೋಪಿಗಳನ್ನು ಬಂಧಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಬಂಧಿತ ಆರೋಪಿಗಳು ಮಡಿಕೇರಿ, ಹಾಸನ, ಹಾಗೂ ಬೆಂಗಳೂರಿನಲ್ಲಿ ತಲೆ ಮರಿಸಿಕೊಂಡಿದ್ದರು. ಆರೋಪಿಗಳ ಬಂಧನಕ್ಕೆ ಸಹಕರಿಸಿದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತಿದ್ದು, ನಗದು ಬಹುಮಾನವನ್ನು ಸಹ ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದರು.