ಬಾಗಲಕೋಟೆ : ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ಪುತ್ರನ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಸಂಭವಿಸಿದೆ.
ಕೊಡ್ಲೆಪ್ಪ ಬೋಳಿ(58) ಮೃತ ಬೈಕ್ ಸವಾರ. ಡಿಸಿಎಂ ಲಕ್ಷ್ಮಣ್ ಸವದಿಯವರ ಹಿರಿಯ ಮಗ ಚಿದಾನಂದ ಸವದಿ ಅವರು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಬೈಕ್ ಗೆ ಡಿಕ್ಕಿ ಹೊಡೆದಿದೆ. ಕಾರ್ ಡಿಕ್ಕಿಯಾಗುತ್ತಿದ್ದಂತೆ ಕೂಡ್ಲೆಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತ ಬೈಕ್ ಸವಾರ ಕೂಡಲೆಪ್ಪ ಬೋಳಿ ಬಾಗಲಕೋಟೆ ತಾಲ್ಲೂಕು ಚಿಕ್ಕಹಂಡರಗಲ್ ಗ್ರಾಮದ ನಿವಾಸಿಯಾಗಿದ್ದು, ಇವರು ಹೊಲಕ್ಕೆ ಹೋಗಿ ವಾಪಸ್ ಬರುವಾಗ ಚಿದಾನಂದ ಸವದಿಯವರ ಕೆಎ-22 ಎಮ್ ಸಿ 5151 ನಂಬರಿನ ಕಾರು ಡಿಕ್ಕಿಯಾಗಿದೆ.
ಬೈಕ್ ಗೆ ಕಾರ್ ಡಿಕ್ಕಿಯಾಗುತ್ತಿದ್ದಂತೆ ಡಿಸಿಎಂ ಪುತ್ರ ಚಿದಾನಂದ್ ನಂಬರ್ ಪ್ಲೇಟ್ ಕಲ್ಲಿನಿಂದ ಜಜ್ಜಿ ಇನ್ನೊಂದು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಆದರೆ, ಸ್ಥಳೀಯರು ಅವರನ್ನು ಕೆಲಹೊತ್ತು ಹಿಡಿದಿಟ್ಟಿದ್ದರು. ಬಳಿಕ ಸ್ಥಳಕ್ಕೆ ಹುನಗುಂದ ಪೊಲೀಸರು ಆಗಮಿಸಿ ಚಿದಾನಂದ ಸವದಿಯನ್ನು ಬಿಡಿಸಿ ಕಳಿಸಿದ್ದಾರೆ ಎನ್ನಲಾಗ್ತಿದೆ. ಅಪಘಾತ ನಡೆದಾಗ ಚಿದಾನಂದ ಸವದಿ ನಾನು ಡಿಸಿಎಂ ಲಕ್ಷಣ್ ಸವದಿ ಮಗ ಎಂದು ಧಮ್ಕಿ ಹಾಕಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.










