ತಿರುವನಂತಪುರಂ: ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಲಸಿಕೆ ಪಡೆಯುವಂತೆ ಉತ್ತೇಜಿಸಲು ಲಸಿಕೆ ಹಾಕದ ಕೋವಿಡ್ -19 ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುವುದಿಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ.
ನಿನ್ನೆ ನಡೆದ ಕೋವಿಡ್-19 ಪರಿಶೀಲನಾ ಸಭೆಯ ಬಳಿಕ ಸಿಎಂ ಪಿಣರಾಯಿ ವಿಜಯನ್ ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದು, ಕೊರೊನಾ ನಿಯಂತ್ರಣ ಕ್ರಮಗಳೊಂದಿಗೆ ಸಹಕರಿಸದ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದಿಲ್ಲ. ಲಸಿಕೆಯನ್ನು ತೆಗೆದುಕೊಳ್ಳದವರಿಗೆ ಚಿಕಿತ್ಸಾ ವೆಚ್ಚವನ್ನೂ ಸರ್ಕಾರ ಭರಿಸುವುದಿಲ್ಲ. ಲಸಿಕೆ ಹಾಕಿಸಿಕೊಳ್ಳದಿದ್ದರೆ ಪ್ರತಿ ವಾರ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ, ಅದಕ್ಕಾಗಿ ಅವರೇ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಅಲರ್ಜಿ ಅಥವಾ ಯಾವುದೇ ಕಾಯಿಲೆಯ ಹಿನ್ನೆಲೆಯಲ್ಲಿ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುವವರು ಸರ್ಕಾರಿ ಸೇವೆಯಲ್ಲಿರುವ ವೈದ್ಯರು ನೀಡಿರುವ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಇದು ಲಸಿಕೆ ಹಾಕಿಸಿಕೊಳ್ಳದ ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೂ ಅನ್ವಯಿಸುತ್ತದೆ. ಪರೀಕ್ಷಾ ವರದಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. ಕಚೇರಿಗೆ ತೆರಳುವವರಿಗೂ ಇದು ಕಡ್ಡಾಯವಾಗಿದೆ ಎಂದು ವಿಜಯನ್ ತಿಳಿಸಿದ್ದಾರೆ.










