ಹಾಸ್ಯನಟ, ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್ ಇನ್ನಿಲ್ಲ…

58
firstsuddi

ಕನ್ನಡ ಚಿತ್ರರಂಗದಲ್ಲಿ ವಸ್ತ್ರಾಲಂಕಾರ ಕಲಾವಿದನಾಗಿ ಹಾಗೂ ಹಾಸ್ಯ ನಟನಾಗಿ ಕೆಲಸ ಮಾಡಿದ್ದ ಗಂಡಸಿ ನಾಗರಾಜ್ ಅವರು ನಿಧನರಾಗಿದ್ದಾರೆ.

ಗಂಡಸಿ ನಾಗರಾಜ್ ಅವರಿಗೆ 57 ವರ್ಷ ವಯಸ್ಸಾಗಿತ್ತು. ಕಳೆದ 5 ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪದ್ಮನಾಭ ನಗರದ ದೇವೇಗೌಡ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 10:30ಕ್ಕೆ ಅವರು ಕೊನೆಯುಸಿರೆಳೆದರು. ಇಂದು ಮಧ್ಯಾಹ್ನ 3.30ರ ಸುಮಾರಿಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಚಿತ್ರರಂಗದ ಆರಂಭದಲ್ಲಿ ಅವಕಾಶ ಸಿಗದೇ ಇದ್ದಾಗ ಟೈಲರಿಂಗ್ ಮಾಡಿಕೊಂಡಿದ್ದರು. ನಂತರ ಅವರಿಗೆ ಕಾಸ್ಟ್ಯೂಮರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಬಳಿಕ 40 ವರ್ಷಗಳ ಕಾಲ ಗಂಡಸಿ ನಾಗರಾಜ್ ಅವರು ಕಾಸ್ಟ್ಯೂಮರ್ ಆಗಿ ಸೈ ಎನಿಸಿಕೊಂಡಿದ್ದರು. ನವರಸ ನಾಯಕ ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು.

ಸರ್ವರ್ ಸೋಮಣ್ಣ, ಬಂಡ ನನ್ನ ಗಂಡ, ಹಬ್ಬ, ಶ್ರೀ ಮಂಜುನಾಥ ಮತ್ತು ರಾಜ ಹುಲಿ ಹೀಗೆ 1000ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. `ಕೋಟಿಗೊಬ್ಬ 3′ ಚಿತ್ರದಲ್ಲಿ ಕೊನೆ ಬಾರಿಗೆ ಅವರು ನಟಿಸಿದ್ದರು.