ವಿಪರೀತ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 5 ಲಕ್ಷ ಹೆಕ್ಟೇರ್ ಬೆಳೆಹಾನಿ : ಆರ್.ಅಶೋಕ್.

51
firstsuddi

ಹಾಸನ : ವಿಪರೀತ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 5 ಲಕ್ಷ ಹೆಕ್ಟೇರ್ ಬೆಳೆಹಾನಿ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ತ್ವರಿತಗತಿಯಲ್ಲಿ ಪರಿಶೀಲನೆ ನಡೆಸಿ ವರದಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.

ಜಿಲ್ಲೆಯ ಅರಕಲಗೂಡು ತಾಲೂಕಿನ ರಾಗಿಮರೂರು ಗ್ರಾಮದಲ್ಲಿ ಬೆಳೆ ಹಾನಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿ ಅಗತ್ಯ ಮಾಹಿತಿ ಪಡೆದು ಪರಿಹಾರ ವಿತರಣೆ ಕ್ರಮಕೈಗೊಳ್ಳುವಂತೆ ಕಂದಾಯ- ಕೃಷಿ- ತೋಟಗಾರಿಕೆ ಇಲಾಖೆ ಅಧಿಕಾರಿಗಳೇ ಈಗಾಗಲೇ ಸೂಚನೆ ನೀಡಿದ್ದು, ವಾರದಿಂದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ 47,022 ಹೆಕ್ಟೇರ್ ಬೆಳೆಹಾನಿ, 310 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸುಮಾರು 100 ಕೋಟಿಗೂ ಹೆಚ್ಚು ಮೌಲ್ಯದ ಬೆಳೆ ನಾಶವಾಗಿದ್ದು ಪರಿಹಾರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬೆಳೆ ಹಾನಿ ಪರಿಹಾರಕ್ಕೆ ಈಗಾಗಲೇ 300 ಕೋಟಿ ರೂ ಪರಿಹಾರ ವಿತರಣೆ ಮಾಡಲಾಗಿದ್ದು, ನಿನ್ನೆ ಸಹ 68 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರಕ್ಕೆ ಎಮ್ ಡಿ ಆರ್ ಎಫ್ ನಿಯಮದಡಿ ನೀಡುತ್ತಿರುವ ಹೆಕ್ಟೇರ್ ಗೆ 6,800 ಪರಿಹಾರವನ್ನು ಹೆಚ್ಚಿಸಬೇಕು ಎಂದು ಈಗಾಗಲೇ ಪ್ರಧಾನಿ ಅವರಿಗೆ ಪತ್ರ ಮುಖೇನ ತಿಳಿಸಲಾಗಿದೆ. ಎನ್ ಡಿ ಆರ್ ಎಫ್ ಪರಿಹಾರ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಇರುವ ನಿಯಮದಂತೆ ನೀಡಲಾಗುತ್ತಿದೆ. ಇದರ ಮೂರು ಪಟ್ಟು ಪರಿಹಾರ ಏರಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಚೆನ್ನೈನಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ ನವಂಬರ್ 30ರವರೆಗೂ ಸಹ ಮಳೆ ಮುಂದುವರಿಯಲಿದೆ. ಆದ್ದರಿಂದ ರೈತರು ಸಹ ಮಳೆಯ ಹವಾಮಾನದ ವೈಪರೀತ್ಯವನ್ನು ಗಮನಿಸಿ ಬೆಳೆ ಕೊಯ್ಲು ಹಾಗೂ ಬೆಳೆ ಸಂರಕ್ಷಣೆಗೆ ಹೆಚ್ಚು ಗಮನಹರಿಸಬೇಕು ಎಂದು ಸಚಿವರು ಮನವಿ ಮಾಡಿದರು.