ವೀರರ ಸ್ವಾಭಿಮಾನ ಮತ್ತು ಕೆಚ್ಚನ್ನು ಶೋಷಿತ ಸಮುದಾಯ ಬೆಳೆಸಿಕೊಳ್ಳಬೇಕು : ಕೆ.ಟಿ.ರಾಧಾಕೃಷ್ಣ.

104
firstsuddi

ಚಿಕ್ಕಮಗಳೂರು : ಭೀಮಾ ಕೋರೆಗಾವ್ ಯುದ್ಧ ನಡೆಸಿದ ವೀರರ ಸ್ವಾಭಿಮಾನ ಮತ್ತು ಕೆಚ್ಚನ್ನು ಶೋಷಿತ ಸಮುದಾಯ ಬೆಳೆಸಿಕೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ಮಾಡಿದರು.

ನಗರದ ಬಿಎಸ್‍ಪಿ ಕಚೇರಿಯಲ್ಲಿ ಇಂದು ನಡೆದ ಭೀಮಾ ಕೋರೆಗಾವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

1818ರಲ್ಲಿ ಪೇಶ್ವೆ 2ನೇ ಬಾಜಿರಾಯನ ದೌರ್ಜನ್ಯ ಮತ್ತು ದುರಾಡಳಿತದ ವಿರುದ್ಧ ಶೋಷಿತ ಸಮುದಾಯದ ಯುವಕರು ನಡೆಸಿದ ಭೀಮಾ ಕೋರೆಗಾವ್ ಯುದ್ಧ ಅವರ ಸ್ವಾಭಿಮಾನದ ಸಂಕೇತ ಎಂದರು.

ಅದನ್ನು ಕೆಳವರ್ಗದ ಜನ ಅರಿತು ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಭ್ರಷ್ಟಾಚಾರ ಶೋಷಣೆ, ದೌರ್ಜನ್ಯ ಮತ್ತು ದುರಾಡಳಿತದ ವಿರುದ್ಧ ಹೋರಾಟ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಚುನಾವಣೆಯಲ್ಲಿನ ಸೋಲು ಮುಂದಿನ ಗೆಲುವಿಗೆ ಮೆಟ್ಟಿಲು, ಹಾಗಾಗಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅಧೀರರಾಗಬಾರದು ಮುಂದಿನ ಚುನಾವಣೆ ಗಳಲ್ಲಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಈಗಿನಿಂದಲೇ ತಯಾರಿ ನಡೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಕಾರ್ಯಕರ್ತ ಜಯಚಂದ್ರ, ಭೀಮಾ ಕೋರೆಗಾವ್ ಯುದ್ಧ ಶೋಷಿತರ ಸ್ವಾಭಿಮಾನದ ಸಂಕೇತವಾಗಿದೆ ಎಂದು ಹೇಳಿದರು.

ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ, ಕೋರೆಗಾವ್ ವೀರರ ಹೋರಾಟ ಮತ್ತು ಛಲವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಕೋರೆಗಾವ್ ಚಳುವಳಿಯನ್ನು ಸರ್ಕಾರ ಮುಚ್ಚಿ ಹಾಕಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅದನ್ನು ಬೆಳಕಿಗೆ ತರದಿದಲ್ಲಿ ಶೋಷಿತ ವರ್ಗಕ್ಕೆ ತಿಳಿಯುತ್ತಿರ ಲಿಲ್ಲ ಎಂದು ಹೇಳಿದರು.

ವಿಜಯೋತ್ಸವದ ಅಂಗವಾಗಿ ಸಮಾರಂಭದಲ್ಲಿ ಸಿಹಿ ವಿತರಿಸಲಾಯಿತು. ಪಕ್ಷದ ಮುಖಂಡರಾದ ಕೆ.ಆರ್.ಗಂಗಾಧರ್, ವಿಜಯಕುಮಾರ್, ಹುಣಸೇಮಕ್ಕಿ ಲಕ್ಷ್ಮಣ್, ನವೀನ್, ವಿನಿತ್, ವಸಂತ, ಕೆ.ಎಸ್.ಮಂಜುಳ, ಸೋಮಶೇಖರ್ ಉಪಸ್ಥಿತರಿದ್ದರು.