ಶಸ್ತ್ರ ಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ ಮೂರು ಬಾರಿ ಥಳಿಸಿದ ವೈದ್ಯ ಅಮಾನತು…

47
firstsuddi

ಬೀಜಿಂಗ್: ಕಣ್ಣಿನ ವೈದ್ಯರೊಬ್ಬರು ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ ಮೂರು ಬಾರಿ ಥಳಿಸಿರುವ ಘಟನೆ ಚೀನಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ 2019ರಲ್ಲಿ ನಡೆದಿದ್ದು, ಇದರ ವೀಡಿಯೋ ಸಾಕಷ್ಟು ವೈರಲ್ ಆಗಿದೆ. ಈ ಸಂಬಂಧ ಆಸ್ಪತ್ರೆಯೂ ಕೂಡ ಸ್ಪಷ್ಟನೆಯ ಹೇಳಿಕೆ ಬಿಡುಗಡೆ ಮಾಡಿತ್ತು. ಸದ್ಯ ವೈದ್ಯನನ್ನೇ ಆಸ್ಪತ್ರೆಯಿಂದ ಅಮಾನತುಗೊಳಿಸಲಾಗಿದೆ.

ಘಟನೆಯ ವಿವರ:- 82 ವರ್ಷದ ಮಹಿಳೆಯೊಬ್ಬರು ಕಣ್ಣಿನ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಾಗ ಈ ಘಟನೆ ನಡೆದಿದೆ. ಶಸ್ತ್ರ ಚಿಕಿತ್ಸೆ ಸಮಯದಲ್ಲಿ ರೋಗಿ ಅವರದ್ದೇ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಿದ್ದರು, ಅದು ವೈದ್ಯರಿಗೆ ಅರ್ಥವಾಗುತ್ತಿರಲಿಲ್ಲ, ಕೋಪಗೊಂಡು ರೋಗಿಯ ತಲೆಗೆ ಮೂರು ಬಾರಿ ವೈದ್ಯ ಹೊಡೆದಿದ್ದಾರೆ.

ಈ ಘಟನೆ 2019ರಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಈ ಘಟನೆಯ ಸಂಪೂರ್ಣ ವೀಡಿಯೋ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋವನ್ನು ಆಸ್ಪತ್ರೆಯ ವೈದ್ಯರೊಬ್ಬರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯೊಂದರಲ್ಲಿ ಹಂಚಿಕೊಂಡಿದ್ದರು. ಬಳಿಕ ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು, ಈಗಲೂ ವೈರಲ್ ಆಗುತ್ತಿದೆ.

ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಆಸ್ಪತ್ರೆ ಕೂಡ ಸ್ಪಷ್ಟನೆ ನೀಡಿದೆ. ಶಸ್ತ್ರಚಿಕಿತ್ಸೆಗಾಗಿ ರೋಗಿಗೆ ಅನಸ್ತೇಶಿಯಾ ನೀಡಲಾಯಿತು. ಆದರೆ ವೃದ್ಧೆ ಅದನ್ನು ಸಹಿಸಿಕೊಳ್ಳಲು ತಯಾರಿರಲಿಲ್ಲ. ಇಷ್ಟು ಮಾತ್ರವಲ್ಲದೇ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೃದ್ಧೆ ತನ್ನ ತಲೆ ಮತ್ತು ಕಣ್ಣುಗುಡ್ಡೆಗಳನ್ನು ಚಲಿಸುತ್ತಲೇ ಇದ್ದಳು. ರೋಗಿಯು ಸ್ಥಳೀಯ ಉಪಭಾಷೆಯನ್ನು ಮಾತನಾಡುತ್ತಿದ್ದರಿಂದ ಮ್ಯಾಂಡರಿನ್‌ನಲ್ಲಿ ವೈದ್ಯರ ಎಚ್ಚರಿಕೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ತುರ್ತು ಪರಿಸ್ಥಿತಿಯಲ್ಲಿಯೂ ರೋಗಿಗೆ ವೈದ್ಯರು ಚಿಕಿತ್ಸೆ ನೀಡಿದರು ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ.

ಆದರೂ ವೃದ್ಧೆಯೊಬ್ಬರ ಬಳಿ ಅಮಾನವೀಯವಾಗಿ ನಡೆದುಕೊಂಡಿದ್ದಕ್ಕೆ, ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬಳಿಕ ಆಸ್ಪತ್ರೆ ಆಡಳಿತ ವೈದ್ಯರನ್ನು ಅಮಾನತುಗೊಳಿಸಿದೆ. ಅಲ್ಲದೆ ವೃದ್ಧೆಯ ಕ್ಷಮೆಯಾಚಿಸಿ ಆಸ್ಪತ್ರೆಯು ಆಕೆಗೆ 5,800 ರೂ. ಪರಿಹಾರವನ್ನು ನೀಡಿತು. ಈ ನಡುವೆ ವೃದ್ಧೆಯ ಎಡ ಕಣ್ಣಿನ ದೃಷ್ಟಿಯೇ ಹೋಗಿದೆ.