ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ‘ಬೇಷರಂ ರಂಗ್..’ ವಿವಾದ ಸೃಷ್ಟಿಸಿದೆ. ಹೀಗಿರುವಾಗಲೇ ಅಯೋಧ್ಯೆಯ ಸ್ವಾಮೀಜಿ ಒಬ್ಬರು ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಾಡನ್ನು ವಿರೋಧಿಸಿ ನಿನ್ನೆ ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಯೋಧ್ಯೆಯ ತಪಸ್ವಿ ಚಾವ್ನಿ ಮಠದ ಪರಮಹಂಸ ಆಚಾರ್ಯ ಅವರು ಮಾತನಾಡಿ, ಪಠಾಣ್ ಸಿನಿಮಾ ಸನಾತನ ಧರ್ಮಕ್ಕೆ ಅವಮಾನ ಮಾಡಿದೆ. ಸದ್ಯಕ್ಕೆ ಶಾರುಖ್ ಖಾನ್ ಅವರ ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿದ್ದೇವೆ. ಒಂದು ವೇಳೆ ಅವರು ಏನಾದರೂ ನನ್ನ ಎದುರಿಗೆ ಬಂದರೆ ಜೀವಂತವಾಗಿ ಸುಡಲು ಹಿಂದುಮುಂದು ನೋಡುವುದಿಲ್ಲ. ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿ ಆಗಿ ಈ ಮಾತನ್ನು ಅವರು ಹೇಳಬಾರದಿತ್ತು ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ.
ಏನೇ ಪ್ರತಿಭಟನೆ ಮಾಡಿದರೂ, ಸಿನಿಮಾ ತಂಡವಂತೂ ಸುಮ್ಮನೆ ಕೂತಿಲ್ಲ. ಸಿನಿಮಾದ ಎರಡನೇ ಹಾಡು ನಾಳೆ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಈ ಹಾಡಿನ ಒಂದೇ ಒಂದು ಫೋಟೋವನ್ನು ರಿಲೀಸ್ ಮಾಡಲಾಗಿದ್ದು, ದೀಪಿಕಾ ಪಡುಕೋಣೆ ಈ ಹಾಡಿನಲ್ಲೂ ಸಖತ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.










