ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈಶ್ವರಪ್ಪ ಘೋಷಣೆ…

48
firstsuddi

ಶಿವಮೊಗ್ಗ: ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಕೆಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.

ನಿನ್ನೆ ಶಿವಮೊಗ್ಗದ ಬಂಜಾರ ಕನ್ವೆನ್ಷನ್ ಹಾಲ್​ನಲ್ಲಿ ಈಶ್ವರಪ್ಪ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಸಭೆಯಲ್ಲಿ ಮುಂದಿನ ನಡೆ ಬಗ್ಗೆ ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು. ಬಳಿಕ ಮಾತನಾಡಿದ ಈಶ್ವರಪ್ಪ, ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಹೋಗುವುದಿಲ್ಲ ಎನ್ನುತ್ತಲ್ಲೇ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು.

ಸ್ವತಂತ್ರವಾಗಿ ಸ್ಪರ್ಧಿಸಿ ನಾನು ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹೋಗುತ್ತಿಲ್ಲ. ಪಕ್ಷ ಒಂದು ಕುಟುಂಬದ ಕೈಯಲ್ಲಿ ಸಿಲುಕಿರುವುದನ್ನು ಬಿಡಿಸಲು ಸ್ಪರ್ಧೆ ಮಾಡುತ್ತೇನೆ. ನೊಂದ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಸ್ಪತಂತ್ರವಾಗಿ ನಿರ್ಧರಿಸುವೆ ಎಂದು ಹೇಳಿದರು. ಈ ಮೂಲಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದರು.

ನನ್ನಿಂದಲೇ ಎನ್ನುವವರ ವಿರುದ್ಧ ಚುನಾವಣಾ ಕಣಕ್ಕೆ ಇಳಿಯುತ್ತಿದ್ದೇನೆ. ಸಭೆಯಲ್ಲಿ ಭಾಗಿಯಾಗಿರುವವರೆಲ್ಲೂ ನನ್ನ ಪರ ಕೆಲಸ ಮಾಡಬೇಕು. ಪಕ್ಷದ ಸಿದ್ಧಾಂತ ಪರವಿರುವ ನನ್ನನ್ನು ಬೆಂಬಲಿಸಬೇಕು. ಚುನಾವಣೆ ವೇಳೆ ಜಾತಿ ವಿಚಾರ ಪ್ರಬಲವಾಗಿ ಚರ್ಚೆಯಾಗುತ್ತದೆ, ಎಲ್ಲಾ ಸಮುದಾಯದ ಮುಖಂಡರನ್ನು ಸಂಪರ್ಕಿಸಿ ನಿರ್ಧರಿಸಿದ್ದು, ಶಿವಮೊಗ್ಗ ಕ್ಷೇತ್ರದಲ್ಲಿ ನಾನು ಗೆದ್ದರೆ ಮೋದಿಯನ್ನೇ ಬೆಂಬಲಿಸುತ್ತೇನೆ, ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಶ್ರಮಿಸೋಣ. ಮೋದಿ ಪ್ರಧಾನಿಯಾದ ನಂತರ ನಾವೆಲ್ಲರೂ ಸೇರಿ ಸಂಭ್ರಮಿಸೋಣ. ಹಾಗಾಗಿ ಮೋದಿ, ಪಕ್ಷದ ಪರವಾಗಿ ಕೆಲಸ ಮಾಡಬೇಕೆಂದು ಈಶ್ವರಪ್ಪ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದರು.