ಶ್ರದ್ಧಾ ಭಕ್ತಿಯಿಂದ ಶ್ರೀ ಆದಿ ಶಂಕರಾಚಾರ್ಯ ಜಯಂತಿ ಆಚರಣೆ…

84
firstsuddi

ಚಿಕ್ಕಮಗಳೂರು: ಅದ್ವೈತ ಸಿದ್ದಾಂತ ಪ್ರತಿಪಾದಕ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಜನ್ಮದಿನವಾದ ನಿನ್ನೆ ಶಂಕರ ಜಯಂತಿಯನ್ನು ನಗರದಲ್ಲಿ ವಿಪ್ರ ಸಮುದಾಯ ಶ್ರದ್ಧಾ ಭಕ್ತಿಯಿಂದ ಆಚರಿಸಿತು.

ಶಂಕರ ಜಯಂತಿ ಅಂಗವಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಶಂಕರ ಮಠದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಅಲಂಕಾರ, ಭಗವತ್ಪಾದರ ವಿಗ್ರಹಕ್ಕೆ ಅಭಿಷೇಕ, ಪಾದುಕಾ ಪೂಜೆ ನೆರವೇರಿದವು.

ಈ ವೇಳೆ ವಿಪ್ರ ಭಕ್ತರಿಂದ ಭಜನೆ, ನಾಮ ಸಂಕೀರ್ತನೆ, ರುದ್ರ ಪಠಣ, ವೇದ ಪಾರಾಯಣ, ಸ್ತೋತ್ರ ಪಠಣ ಜರುಗಿತು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಕಳಸಾಪುರದ ವಿಭಾ ಮತ್ತು ಚಂದನ ಅವರಿಂದ ಭಜಗೋವಿಂದಂ ಸ್ತೋತ್ರದ ಗಾಯನ ಹಾಗೂ ಮನೋರಂಜನ ಸಂಗೀತ, ಮಹಾವಿದ್ಯಾಲಯದ ಬಿ.ಸಿ ಜಯರಾಮ್ ತಂಡದಿಂದ ಶಂಕರಾಚಾರ್ಯ ವಿರಚಿತ ಸ್ತೋತ್ರಗಳ ಗಾಯನ ನಡೆಯಿತು.

ಸಂಪಗೋಡು ಗುರುಮೂರ್ತಿ ಅವರಿಂದ ಭಗವತ್ಪಾದರ ಕುರಿತು ಉಪನ್ಯಾಸ ಜರುಗಿತು. ರಾತ್ರಿ ನಡೆದ ಪ್ರಾಕಾರೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನೆರವೇರಿತು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎಲ್ ಶ್ರೀಧರ್, ಸಮಿತಿಯ ಪದಾಧಿಕಾರಿಗಳಾದ ಹಿರೇಮಗಳೂರು ಪ್ರಸಾದ್, ಸುರೇಶ್ ಭಾರತಿ, ನವೀನ್, ಅರವಿಂದ ದೀಕ್ಷಿತ್, ರಮಾ ಪ್ರಸಾದ್, ಶಂಕರ ಮಠದ ಗೌರವ ಪ್ರತಿನಿಧಿ ಚನ್ನಕೇಶವ, ಎ.ಎಸ್.ಕುಮಾರ್, ಸೀತಾಲಕ್ಷ್ಮಿ ಗೋಪಿನಾಥ್ ಹಾಜರಿದ್ದರು.